ಸಂವಿಧಾನ ಅಲುಗಾಡಿಸಿದವರಿಂದಲೇ ‘ಉಳಿಸಿ’ ಗಿಮಿಕ್: ಪದ್ಮರಾಜ್ ಆರ್. ಪೂಜಾರಿ

ಸಂವಿಧಾನ ಅಲುಗಾಡಿಸಿದವರಿಂದಲೇ ‘ಉಳಿಸಿ’ ಗಿಮಿಕ್: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿ, ತನಿಖಾ ಸಂಸ್ಥೆಗಳನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸಿದ ಬಿಜೆಪಿಯವರು, ಇಂದು ಜನರೆದುರು ‘ಪ್ರಜಾಪ್ರಭುತ್ವ ಉಳಿಸಿ’ ಎಂದು ರಸ್ತೆಗಿಳಿದಿರುವುದು ಇತಿಹಾಸ ಕಂಡ ಅತಿ ದೊಡ್ಡ ಗಿಮಿಕ್ ಎಂದು ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂವಿಧಾನ ನೀಡಿರುವ ಅತ್ಯಂತ ಪವಿತ್ರವಾದ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರಗಳ ವಿರುದ್ಧ ರಾಹುಲ್ ಗಾಂಧಿಯವರು ‘ವೋಟ್ ಚೋರಿ’ಯನ್ನು ಬಯಲಿಗೆಳೆದು ನಿರಂತರ ಹೋರಾಟ ನಡೆಸಿದ ಪರಿಣಾಮವಾಗಿ, ಇಂದು ದೇಶಾದ್ಯಂತ ಕೋಟ್ಯಂತರ ಸಾಮಾನ್ಯ ನಾಗರಿಕರು, ಯುವಕರು ಮತ್ತು ಶೋಷಿತರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಜಾಗೃತರಾಗಿ ಬೀದಿಗಿಳಿದಿದ್ದಾರೆ. ಜನರ ಈ ಮಹಾ ಜನಾಂದೋಲನದಿಂದ ಕಂಗೆಟ್ಟಿರುವ ಆಡಳಿತ ಪಕ್ಷವು, ರಾಹುಲ್ ಗಾಂಧಿಯವರ ಸತ್ಯದ ಹೋರಾಟವನ್ನು ಮರೆಮಾಚಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಸ್ವತಃ ತಾವೇ ‘ಹೋರಾಟ’ದ ಮುಖವಾಡ ಧರಿಸಿ ನಾಟಕವಾಡುತ್ತಿದೆ. ಆದರೆ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದವರ ಹುಸಿ ಕೂಗುಗಳು, ಹಕ್ಕುಗಳಿಗಾಗಿ ಸಿಡಿದೆದ್ದ ಜನರ ನೈಜ ಧ್ವನಿಯನ್ನು ಎಂದಿಗೂ ಹತ್ತಿಕ್ಕಲು ಸಾಧ್ಯವಿಲ್ಲ.

ರಾಜಕೀಯ ಸಮಾವೇಶದಲ್ಲಿ ಕುಣಿತ ಭಜನೆ: ಆಕ್ಷೇಪ

ಬಿಜೆಪಿ ಮಂಗಳೂರು ವಿಭಾಗದ ರಾಜಕೀಯ ಸಮಾವೇಶದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ‘ಕುಣಿತ ಭಜನೆ’ ಮಾಡಿಸಿರುವು ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಭಜನೆ ಎಂಬುದು ಕೇವಲ ನೃತ್ಯ ಅಥವಾ ಕಲೆಯಲ್ಲ, ಅದು ಭಕ್ತಿ, ಸಮರ್ಪಣಾ ಭಾವ ಮತ್ತು ಅಂತರಂಗದ ಶಾಂತಿಯನ್ನು ಅರಸುವ ಪವಿತ್ರ ಆಧ್ಯಾತ್ಮಿಕ ಸಾಧನೆ. ದೇಗುಲಗಳ ಪಾವಿತ್ರ್ಯತೆಯಲ್ಲಿ, ಭಕ್ತ ಸಮೂಹದ ಶ್ರದ್ಧಾಭರಿತ ವಾತಾವರಣದಲ್ಲಿ ಮೊಳಗಬೇಕಾದ ದೈವಿಕ ಸಂಕೀರ್ತನೆಯನ್ನು ರಾಜಕೀಯ ಮೆರವಣಿಗೆಯ ಆಕರ್ಷಣೆಯಾಗಿ ಬಳಸಿರುವುದು ನಮ್ಮ ಭಕ್ತಿ ಪರಂಪರೆಗೆ ಬಗೆದ ಅಪಚಾರ ಆಗಿದೆ.

ಪ್ರಜಾಪ್ರಭುತ್ವದಲ್ಲಿ ರಾಜಕಾರಣವು ಜನರ ನೈಜ ಸಮಸ್ಯೆಗಳು, ಸುಸ್ಥಿರ ಅಭಿವೃದ್ಧಿ ಹಾಗೂ ದಕ್ಷ ಆಡಳಿತದ ಸಿದ್ಧಾಂತಗಳ ಮೇಲೆ ಮುನ್ನಡೆಯಬೇಕೇ ವಿನಃ, ಜನರ ನಂಬಿಕೆಗಳನ್ನು ಮತ್ತು ದೇವರ ಹೆಸರನ್ನು ಮತಬ್ಯಾಂಕ್‌ನ ಬಂಡವಾಳವಾಗಿಸಿಕೊಂಡಲ್ಲ. ಸಂಸ್ಕೃತಿ ರಕ್ಷಣೆಯ ಸುಳ್ಳು ಮುಖವಾಡ ಧರಿಸಿ, ದೈವಭಕ್ತಿಯನ್ನು ರಾಜಕೀಯ ಪ್ರಚಾರದ ಸರಕನ್ನಾಗಿಸುವುದು ಎಷ್ಟು ಸರಿ?

ಸುಳ್ಳು ಸುದ್ದಿಗಳ ಮೂಲಕ ಜನರ ದಾರಿ ತಪ್ಪಿಸುವ ಗಿಮಿಕ್ ರಾಜಕಾರಣವನ್ನು ಮುಂದುವರಿಸಿಕೊಂಡು, ಜನರ ವಿಶ್ವಾಸ ಗಳಿಸುವ ಭ್ರಮೆಯಲ್ಲಿರುವ ಬಿಜೆಪಿಯನ್ನು ರಾಜ್ಯದ ಪ್ರಜ್ಞಾವಂತ ನಾಗರಿಕರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article