ದಂಪತಿಗೆ ಹಲ್ಲೆಗೈದು ಬೆದರಿಕೆ ಪ್ರಕರಣ: ಆರೋಪಿಗಳಿಗೆ 1,01,000 ರೂ. ದಂಡ
ಬಂಟ್ವಾಳ: ನಾಲ್ಕು ವರ್ಷದ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರಪಾಡಿ ಗ್ರಾಮದ ಅಲ್ಲಿಪಾದೆ ಎಂಬಲ್ಲಿ ಜಾಗದ ವಿಚಾರದ ತಕರಾರಿನಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಮನಸ್ತಾಪ ಉಂಟಾಗಿ, ಪರಿಶಿಷ್ಟ ಜಾತಿಗೆ ಸೇರಿದ ದಂಪತಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣದ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಂಡ ವಿಧಿಸಿ ಆದೇಶ ಪ್ರಕಟಿಸಿದೆ.
ಅಲ್ಲಿಪಾದೆಯ ರಾಜೇಶ ಮತ್ತು ಅವರ ಪತ್ನಿಗೆ ನೆರೆಮನೆಯ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ ಆತನ ಪತ್ನಿ ಜಯಂತಿ, ಮಗ ವಿನೋದ, ಪಕ್ಕದ ಮನೆಯವರಾದ ಮನೂ ಮತ್ತು ಲಕ್ಷ್ಮಣ ಸಹಿತ ನಾಲೈದು ಮಂದಿ ಅಕ್ರಮ ಕೂಟ ಸೇರಿ ಹಲ್ಲೆಗೈದಿದಲ್ಲದೆ ಜೀವ ಬೆದರಿಕೆ ಒಡ್ಡಿದ್ದರು.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2022 ಅಕ್ಟೋಬರ್ 24 ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಬಂಟ್ವಾಳ ಎಎಸ್ಪಿ ಪ್ರತಾಪ್ ಸಿಂಗ್ ಥೋರಟ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಪ್ರಕರಣದ ವಾದ- ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿಗಳಾದ ಕೃಷ್ಣಪ್ಪ ನಾಯ್ಕ, ಜಯಂತಿ, ಮುನ್ನ ಅಲಿಯಾಸ್ ಹೇಮಂತ್ ನಾಯ್ ವಿಶ್ವನಾಥ, ಭೋಜ, ಹರಿ ಅಲಿಯಾಸ್ ಹರಿಶ್ಚಂದ್ರ, ಗುಲಾಬಿ ಹಾಗೂ ರುಕ್ಕಿಣಿ ಎಂಬವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಟ್ಟು 1,01,000 ರೂ. ದಂಡ ವಿಧಿಸಿ ಅದೇಶಿಸಿದ್ದಾರೆ.
ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದಿಸಿದ್ದರು.