ಶ್ರೀ ಚಂದ್ರಶೇಖರ ದೇವಸ್ಥಾನದ ನವೀಕೃತ ಪುಷ್ಕರಣಿಯ ಸಮರ್ಪಣೆ

ಶ್ರೀ ಚಂದ್ರಶೇಖರ ದೇವಸ್ಥಾನದ ನವೀಕೃತ ಪುಷ್ಕರಣಿಯ ಸಮರ್ಪಣೆ


ಮೂಡುಬಿದಿರೆ: ಸುಮಾರು 600 ವರ್ಷಗಳ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಹೊಂದಿರುವ ದೊಡ್ಮನೆ ರಸ್ತೆಯಲ್ಲಿರುವ ಶ್ರೀ ಚಂದ್ರಶೇಖರ ದೇವಸ್ಥಾನದ ನವೀಕೃತ ಪುಷ್ಕರಣಿಯ ಸಮರ್ಪಣಾ ಸಮಾರಂಭವು  ಶನಿವಾರ ಬೆಳಿಗ್ಗೆ  ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಚೌಟ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂಆರ್‌ಪಿಎಲ್ ಮಂಗಳೂರಿನ ಸಿಎಸ್‌ಆರ್ ಫಂಡ್ ಮ್ಯಾನೇಜರ್ ಹರೀಶ್ ರಾವ್ ಭಾಗವಹಿಸಿದ್ದರು.

ಅಧ್ಯಕ್ಷೀಯ ಭಾಷಣ ಮಾಡಿದ ಕುಲದೀಪ್ ಎಂ. ಚೌಟ, ಅರಮನೆಯ ಪ್ರಧಾನಿಗಳಾದ ನಾರಣಪ್ಪಯ್ಯನವರು ಆರಾಧಿಸಿಕೊಂಡು ಬಂದಿರುವ ಶ್ರೀ ಚಂದ್ರಶೇಖರ ದೇವರಿಗೂ ಅರಮನೆಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಮುಂದುವರಿಯಲಿದೆ. ಶ್ರೀ ಚಂದ್ರಶೇಖರ ದೇವರ ಜೀರ್ಣೋದ್ಧಾರದ ಸಂದರ್ಭದಲ್ಲಿ ಅರಮನೆಯ ಸಹಕಾರ ಹಾಗೂ ಬೆಂಬಲ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಆರ್‌ಪಿಎಲ್ ಸಂಸ್ಥೆ ಸ್ಥಾಪನೆಯಾಗಲು ಅಂದಿನ ಮುಖ್ಯಮಂತ್ರಿಯಾಗಿದ್ದ ನಮ್ಮೂರಿನವರೇ ಆದ ವೀರಪ್ಪ ಮೊಯಿಲಿಯವರ ದೂರದೃಷ್ಟಿ ಹಾಗೂ ವಿಶೇಷ ಪ್ರಯತ್ನಗಳು ಪ್ರಮುಖ ಕಾರಣವಾಗಿವೆ. ಹಲವಾರು ವಿರೋಧಗಳ ನಡುವೆಯೂ ಎಂಆರ್‌ಪಿಎಲ್ ಸಂಸ್ಥೆಯನ್ನು ಜಿಲ್ಲೆಗೆ ತರುವಲ್ಲಿ ಅವರು ತೋರಿದ ಬದ್ಧತೆ ಮತ್ತು ದೂರದೃಷ್ಟಿಯ ಫಲವಾಗಿ ಇಂದು ಸಂಸ್ಥೆಯು ವಿವಿಧ ಸಾಮಾಜಿಕ ಕಾರ್ಯಗಳಿಗೆ ಸಿಎಸ್‌ಆರ್ ಅನುದಾನ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮೂಡುಬಿದಿರೆ ಪೇಟೆಯ ಹೃದಯಭಾಗದಲ್ಲಿರುವ ಶ್ರೀ ಚಂದ್ರಶೇಖರ ದೇವಸ್ಥಾನ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ದೇವಾಲಯವಾಗಿದೆ. ಇಂತಹ ದೇವಾಲಯದ ಪುಷ್ಕರಣಿಯನ್ನು ನವೀಕರಿಸಿ ಸಮರ್ಪಿಸುತ್ತಿರುವುದು ಮೂಡುಬಿದಿರೆಯ ಇತಿಹಾಸದಲ್ಲಿ ಸ್ಮರಣೀಯ ಹಾಗೂ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಹದಿನೆಂಟು ಬಸದಿ, ಹದಿನೆಂಟು ದೇವಸ್ಥಾನ ಹಾಗೂ ಹದಿನೆಂಟು ಕೆರೆಗಳ ಹೆಗ್ಗಳಿಕೆಯನ್ನು ಹೊಂದಿರುವ ಮೂಡುಬಿದಿರೆಯ ಗತವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ, ಕಾಲಕ್ರಮೇಣ ಅಳಿದುಹೋದ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಪುಷ್ಕರಣಿಯ ನವೀಕರಣಕ್ಕೆ ಸಹಕರಿಸಿದ ಹಾಗೂ ಕಾರ್ಯಕ್ಕೆ ಕೈಜೋಡಿಸಿದ ಎಲ್ಲ ಮಹನೀಯರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಈ ಮಹತ್ಕಾರ್ಯಕ್ಕೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.

ಈ ಸಂದರ್ಭ ಎಂ.ಆರ್.ಪಿ.ಎಲ್ ಸಂಸ್ಥೆಯ ಮ್ಯಾನೆಜರ್‌ ಹರೀಶ್‌ ರಾವ್‌ ರವರನ್ನು ಹಾಗೂ ದೇವಸ್ಥಾನದ ಅರ್ಚಕರಾದ ರತ್ನಾಕರ್‌ ಭಟ್‌ ರವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ  ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಶೇಖರ ಎಂ., ಪ್ರಮುಖರಾದ ಸುದೇಶ್ ಕುಮಾರ್ ಪಟ್ಟಣ ಶೆಟ್ಟಿ, ಉಮೇಶ್ ಪೈ, ರಾಯಿ ರಾಜ್‌ಕುಮಾರ್, ಗಣೇಶ್ ಕಾಮತ್ ಹಾಗೂ ಗಣೇಶ್ ನಾಯಕ್ ಉಪಸ್ಥಿತರಿದ್ದರು. ಗೌರವ ಉಪಸ್ಥಿತರಾಗಿ ಡಾ. ಮುರಳೀಕೃಷ್ಣ, ಅನುವಂಶೀಯ ಅರ್ಚಕ ರತ್ನಾಕರ ಭಟ್, ಪುಷ್ಕರಣಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶೋಭಿತ್ ಕುಮಾರ್ ಜೈನ್ ಹಾಗೂ ಶ್ರೀ ಗೌರಿ ದೇವಸ್ಥಾನದ ರಾಜೇಶ್ ಭಟ್ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article