ಸೋಮನಾಥ ಪುತ್ರನ್ ಆತ್ಮಹತ್ಯೆ ಪ್ರಕರಣ ಸಿಐಡಿಗೆ
ಮಂಗಳೂರು: ರಾಜ್ಯಾದ್ಯಂತ ತೀವ್ರ ಸಾರ್ವಜನಿಕ ಚರ್ಚೆ ಮತ್ತು ಆಕ್ರೋಶಕ್ಕೆ ಗ್ರಾಸವಾಗಿದ್ದ ಸುರತ್ಕಲ್ ಹೊಸಬೆಟ್ಟು ಬೀಚ್ ವಿವಾದ ಹಾಗೂ ಸೋಮನಾಥ್ ಪುತ್ರನ್ ಆತ್ಮಹತ್ಯೆಗೆ ಸಂಬಂಧಿಸಿದ ಮೂರೂ ಪ್ರತ್ಯೇಕ ಪ್ರಕರಣಗಳನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಒಪ್ಪಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಹೊಸಬೆಟ್ಟು ಬೀಚ್‌ನಲ್ಲಿ ಕಾರು ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಸೋಮನಾಥ್ (48) ಎಂಬುವರು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಸುರತ್ಕಲ್ ಠಾಣೆಯ ಎದುರು ಶವವಿಟ್ಟು ಪ್ರತಿಭಟನೆ ನಡೆಸಿ, ದೂರುದಾರ ಯುವತಿ ಹಾಗೂ ಆಕೆಯ ಗೆಳೆಯನ ಕಿರುಕುಳವೇ ಸಾವಿಗೆ ಕಾರಣವೆಂದು ಆಕ್ರೋಶ ಹೊರಹಾಕಿದ್ದರು.
ಪ್ರಕರಣದ ಗಂಭೀರತೆ ಹಾಗೂ ಸಾರ್ವಜನಿಕ ಒತ್ತಡವನ್ನು ಪರಿಗಣಿಸಿದ ರಾಜ್ಯ ಸರ್ಕಾರವು ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಿದೆ.
ಮೂರು ಪ್ರಮುಖ ಪ್ರಕರಣಗಳು..
ಮೊದಲ ಪ್ರಕರಣ..
ಅಕ್ಟೋಬರ್ 25ರ ರಾತ್ರಿ ಹೊಸಬೆಟ್ಟು ಮೀನುಗಾರಿಕಾ ಜೆಟ್ಟಿ ಬಳಿ ಬೀಚ್ಗೆ ಬಂದಿದ್ದ ಯುವತಿ ಮತ್ತು ಆಕೆಯ ಗೆಳೆಯನಿಗೆ ಅಡ್ಡಿಪಡಿಸಿ, ನಿಂದಿಸಿದ ಆರೋಪದಡಿ ಮೃತ ಸೋಮನಾಥ್ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಕೇಸ್.
ಎರಡನೇ ಪ್ರಕರಣ..
ಅಕ್ಟೋಬರ್ 27ರಂದು ಬೆಳಗ್ಗೆ ಹೊಸಬೆಟ್ಟಿನ ಮನೆಯಲ್ಲಿ ಸೋಮನಾಥ್ ಡೆತ್ನೋಟ್ ಬರೆದಿಟ್ಟು ಸಾವನ್ನಪ್ಪಿದ ಅಸಹಜ ಸಾವು ಪ್ರಕರಣ.
ಮೂರನೇ ಪ್ರಕರಣ..
ಯುವತಿ ಮತ್ತು ಆಕೆಯ ಗೆಳೆಯ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಅವಮಾನಿಸಿ ಗಂಡನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಮೃತನ ಪತ್ನಿ ಸರಿತಾ ಅವರು ಸುರತ್ಕಲ್ ಠಾಣೆಗೆ ನೀಡಿದ ದೂರು.