ತುಳುನಾಡ್ ಮನ್ಸ ಸಮಾಜ ಸೇವಾ ಸಂಘದ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ: ಪರಿಶಿಷ್ಟ ಜಾತಿಗೆ ಸೇಪ೯ಡೆಗೆ ಆಗ್ರಹ
ಸಭೆಯಲ್ಲಿ ಮನ್ಸ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಮುಂದಿನ ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಘದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಆನಂದ ಕೊಪ್ಪ ಮಾತನಾಡಿ, ಸಮುದಾಯದ ಮೂಲ ಜಾತಿ ಹೆಸರಾದ 'ಮನ್ಸ' ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದರಿಂದ ಮೀಸಲಾತಿ ಸೌಲಭ್ಯಗಳಿಂದ ವಂಚಿತವಾಗಿದೆ. ಇದರಿಂದ ಸಮುದಾಯವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶತಮಾನಗಳಷ್ಟು ಹಿಂದೆ ಉಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 'ಆದಿದ್ರಾವಿಡ' ಎಂದೂ, ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 'ಆದಿಕರ್ನಾಟಕ' ಎಂದೂ ಜಾತಿ ಪ್ರಮಾಣಪತ್ರ ಪಡೆದು ಸದ್ಯ ಮೀಸಲಾತಿ ಸೌಲಭ್ಯ ಪಡೆಯಲಾಗುತ್ತಿದೆ. ಆದರೆ, ಮನ್ಸ ಸಮುದಾಯದ ಮೂಲ ಅಸ್ಮಿತೆಯನ್ನು ಉಳಿಸಿಕೊಂಡು ಅಧಿಕೃತವಾಗಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಂಘದ ಅಧ್ಯಕ್ಷ ವೆಂಕಣ್ಣ ಕೊಯ್ಯೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮನ್ಸ ಸಮುದಾಯದ ಜನರು ತಮ್ಮ ಮೂಲ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಹರಿಯಪ್ಪ ಮುತ್ತೂರು, ಗೌರವಾಧ್ಯಕ್ಷರಾಗಿ ಎಂ. ಶಾಂತರಾಮ್ (ಪುನರಾಯ್ಕೆ), ಪ್ರಧಾನ ಕಾರ್ಯದರ್ಶಿಯಾಗಿ ರಾಜೀವ ಕಕ್ಕೆಪದವು, ಜೊತೆ ಕಾರ್ಯದರ್ಶಿಯಾಗಿ ವಾಸು ಶಿರ್ತಾಡಿ (ಪುನರಾಯ್ಕೆ) ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮೂಡಿಗೆರೆ ತಾಲೂಕಿನ ಬಾಬು ಹಾಂದಿ ಮತ್ತು ರಮೇಶ್ ಮೂಡುಕೋಣಾಜೆ (ಪುನರಾಯ್ಕೆ), ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಬೋಧಿ (ಪುನರಾಯ್ಕೆ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ ಗೋಳಿಯಂಗಡಿ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಬಾಬು ಮಾಸ್ಟರ್, ಅಚ್ಯುತ ಸಂಪಿಗೆ , ವೆಂಕಣ್ಣ ಕೊಯ್ಯೂರು ಮತ್ತು ಗೋಪಾಲ್ ಮುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ಶಾಲಿನಿ ಆರ್. ಬೋಧಿ ಮಾತನಾಡಿದರು. ಸಂಘದ ಗತ ವರ್ಷದ ವರದಿಯನ್ನು ಉದಯ ಗೋಳಿಯಂಗಡಿ ವಾಚಿಸಿದರು. ಕಿರಣ್ ದಾಸ್ ಎಡಪದವು ವಂದಿಸಿದರು ಎಂ. ರಮೇಶ್ ಬೋಧಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಪದಾಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು.