ಪಶ್ಚಿಮ ವಲಯದ ನಾಲ್ಕು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಶಾಂತಿಯುತ ವಾತಾವರಣ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣಕ್ಕೆ ಆದ್ಯತೆ: ಐಜಿಪಿ ಎನ್. ಶಶಿಕುಮಾರ್
ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಗುರುವಾರ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಂದ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಈಗಾಗಲೇ ವಲಯದ ಎಸ್ಪಿ ಹಾಗೂ ಹೆಚ್ಚುವರಿ ಎಸ್ಪಿಗಳಿಂದ ಅವರ ಜಿಲ್ಲೆಯ ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಗಳು ಹಾಗೂ ಸೂಕ್ಷ್ಮ ವಿಚಾರಗಳು ಸೇರಿದಂತೆ ಸಂಕ್ಷಿಪ್ತ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಪ್ರತಿ ಜಿಲ್ಲೆಯ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಪಶ್ಚಿಮ ವಲಯ ವಿವಿಧ ಜಿಲ್ಲೆಗಳ ಜಿಲ್ಲಾಡಳಿತದ ಜತೆಗೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಲು ಘಟಕಾಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಇಲ್ಲಿನ ಹಲವು ಜಿಲ್ಲೆಯ ಘಟಕಾಧಿಕಾರಿಗಳು ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿನ ವಿಷಯಗಳ ಬಗ್ಗೆ ಮಾಹಿತಿ ಇರುವುದರಿಂದ ಒಳ್ಳೆಯ ತಂಡದ ಜತೆ ಕೆಲಸ ಮಾಡುವ ಮನಸ್ಥಿತಿಯಲ್ಲಿದ್ದಾರೆ ಎಂದವರು ಹೇಳಿದರು.
ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ ಇಲಾಖೆಯ ಜತೆಗೆ ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಸಾಮಾಜಿಕ ಸಂಘಟನೆಗಳು, ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮ ಸಹಕಾರ ನೀಡಿದ್ದು, ಮುಂದೆಯೂ ಸಹಕಾರ ಬಯಸುತ್ತಿದ್ದೇನೆ ಎಂದವರು ಹೇಳಿದರು.
ಕರಾವಳಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಸದ್ಯ ನಿಮ್ಮ ಮುಂದಿರುವ ಸವಾಲುಗಳೇನು ಎಂಬ ಸುದ್ದಿಗಾರರ ಪ್ರಶ್ನೆಗೆ, ಪೊಲೀಸ್ ವ್ಯವಸ್ಥೆಯಡಿ ಪ್ರತಿ ವಲಯ ಅಥವಾ ಜಿಲ್ಲೆಗಳಲ್ಲಿ ಸ್ಥಳೀಯ ವಿಷಯಗಳಿರುತ್ತವೆ. ಒಂದು ಕಡೆ ಪೊಲೀಸ್ ಪ್ರತಿ ಸಾರ್ವಜನಿಕ ನಿರೀಕ್ಷೆ ಇನ್ನೊಂದು ಕಡೆ ಇರುವುದಿಲ್ಲ. ಆದರೂ ನಮ್ಮ ಪ್ರಮುಖ ಆದ್ಯತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಯುವ ವಾತಾವರಣ ನಿರ್ಮಿಸುವುದು, ಅಪರಾಧ ತಡೆ ಹಾಗೂ ಪತ್ತೆ ಕಾರ್ಯ, ಸಂಚಾರ ಸಮಸ್ಯೆಗಳು ಹಲವು ಕಡೆ ನಿಭಾಯಿಸಬೇಕಾಗಿರುತ್ತದೆ. ಜತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡುವಲ್ಲಿ ಇಲಾಖೆಯ ಎಲ್ಲ ಅಧಿಕಾರಿ ಸಿಬ್ಬಂದಿಯನ್ನು ಪ್ರೇರೇಪಿಸುವ ಕಾರ್ಯ ಮಾಡಬೇಕಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ತ್ವರಿತ ಕ್ರಮ ಅಗತ್ಯವಾಗಿರುತ್ತದೆ.
ಯಾವುದೇ ಪ್ರತಿಕ್ರಿಯೆಗೆ ಕ್ರಮಕ್ಕೆ ಹೆಚ್ಚಿನ ಸಮಯ ಇರುವುದಿಲ್ಲ. ಹಾಗಾಗಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿಕೊಂಡು ಅವಲೋಕನ ಮಾಡಿಕೊಂಡರೆ ಸಮಸ್ಯೆಗಳ ಸಂದರ್ಭ ಸುಲಭವಾಗಿ ನಿಭಾಯಿಸಲು ಸಾಧ್ಯವಾಗಲಿದೆ. ಪ್ರಸಕ್ತ ಯಾವುದೇ ಸಮಸ್ಯೆ ಎದುರಾದಾಗ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿಯುತ ವಾತಾವರಣ ಕಾಪಾಡುವಲ್ಲಿ ನಮ್ಮ ಆದ್ಯತೆ ಇರಲಿದೆ ಎಂದರು.