ಗ್ಯಾರಂಟಿ ಹೆಸರಲ್ಲಿ ಕರ್ನಾಟಕದ ಲೂಟಿ: ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿದೆ: ಆರ್. ಅಶೋಕ್
ಅಲ್ಪಸಂಖ್ಯಾತರ ಓಲೈಕೆಗಾಗಿ ಇತರ ಸಮುದಾಯಗಳ ಮಕ್ಕಳಿಗೆ ಅನ್ಯಾಯ: ಸಾರಿಗೆ ಸಂಸ್ಥೆಗಳಿಗೆ ₹5,000 ಕೋಟಿ ಬಾಕಿ ಉಳಿಸಿ ಬಸ್ ದರ ಏರಿಕೆ–ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ವಾಗ್ದಾಳಿ
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಪ್ರತಿ ತಿಂಗಳು ಮಹಿಳೆಯರ ಮನೆ ಬಾಗಿಲಿಗೆ ತಪ್ಪದೆ ₹2,000 ತಲುಪಿಸುವುದಾಗಿ ಭರವಸೆ ನೀಡಿತ್ತು. ಆದರೆ ಈಗ ತೆರಿಗೆ ಸಂಗ್ರಹವಾದಂತೆ ಹಣ ನೀಡುತ್ತೇವೆ ಎಂದು ಹೇಳುತ್ತಿದೆ. ಜನರ ಬದುಕಿಗೆ ಶಕ್ತಿ ತುಂಬಬೇಕೆಂದು ಕೇಳಿದರೆ, ಅವರ ಜೇಬಿಗೆ ನಿಶ್ಯಕ್ತಿ ಉಂಟುಮಾಡಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಜನರ ಮೇಲೆ ಹೆಚ್ಚುವರಿ ತೆರಿಗೆಗಳ ಹೊರೆ ಹಾಕಲಾಗಿದೆ ಎಂದು ಟೀಕಿಸಿದರು.
ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮಗೆ ₹2,000 ಬೇಡ, ಪ್ರಿಯಾಂಕಾ ಗಾಂಧಿ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದ ₹15,000 ಗೌರವಧನ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಚುನಾವಣೆಯಲ್ಲಿ ಮತ ಪಡೆಯಲು ಕಾಂಗ್ರೆಸ್ ನೀಡಿದ ಭರವಸೆಗಳಿಗೂ ಈಗಿನ ವಾಸ್ತವಕ್ಕೂ ಸಂಬಂಧವೇ ಇಲ್ಲವಾಗಿದೆ ಎಂದರು.
ಹಾವೇರಿ ಜಿಲ್ಲೆಯ ಶಾಲೆಯೊಂದರಲ್ಲಿ 300 ಮಕ್ಕಳು ಬಿಸಿಯೂಟಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳಿಂದ ಅಕ್ಕಿ ಪೂರೈಕೆಯಾಗದ ಕಾರಣ ಗ್ರಾಮಸ್ಥರು ಭಿಕ್ಷೆ ಬೇಡಿ ಮಕ್ಕಳಿಗೆ ಊಟ ನೀಡುವ ಸ್ಥಿತಿ ಎದುರಾಗಿದೆ. ಒಂದೆರಡು ದಿನಗಳ ವಿಳಂಬವನ್ನು ಕ್ಷಮಿಸಬಹುದು. ಆದರೆ ಒಂದು ತಿಂಗಳಿನಿಂದ ಬಡ ಮಕ್ಕಳಿಗೆ ಅಕ್ಕಿ ಒದಗಿಸಲಾಗದ ಸರ್ಕಾರದ ವೈಫಲ್ಯ ಖಂಡನೀಯ. ಮತ್ತೊಂದೆಡೆ ಮುಖ್ಯಮಂತ್ರಿಗಳ ಮನೆಯಲ್ಲಿ ನಡೆಯುವ ಔತಣಕೂಟದಲ್ಲಿ ಪಾಯಸ, ಗೋಡಂಬಿ, ದ್ರಾಕ್ಷಿ, ತುಪ್ಪ, ಕೇಸರಿಯ ಮೃಷ್ಟಾನ್ನ ಭೋಜನದ ವ್ಯವಸ್ಥೆ ಇದೆ. ಬಡ ಮಕ್ಕಳಿಗೆ ಊಟ ನೀಡಲು ಸಾಧ್ಯವಾಗದ ಸರ್ಕಾರಕ್ಕೆ ಇಂತಹ ಔತಣಕೂಟಗಳ ಅಗತ್ಯವೇನು ಎಂದು ಪ್ರಶ್ನಿಸಿದರು.
ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಸುಮಾರು ₹5,000 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಹಣವನ್ನು ಪಾವತಿಸಿದ್ದರೆ ಬಸ್ ಪ್ರಯಾಣ ದರ ಏರಿಸುವ ಅಗತ್ಯವೇ ಬರುತ್ತಿರಲಿಲ್ಲ. ಹದಗೆಟ್ಟ ಬಸ್‌ಗಳಲ್ಲಿ ಪ್ರಯಾಣಿಕರು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಕೆಲವು ಬಸ್‌ಗಳಲ್ಲಿ ಮುಂಭಾಗ ಮತ್ತು ಹಿಂಭಾಗದ ಗಾಜುಗಳೇ ಇಲ್ಲ. ಉತ್ತರ ಕರ್ನಾಟಕದಲ್ಲಿ ಬಸ್‌ಗಳನ್ನು ಪ್ರಯಾಣಿಕರೇ ತಳ್ಳಬೇಕಾದ ಸ್ಥಿತಿ ಇದೆ. ಇಂತಹ ದುಸ್ಥಿತಿಯ ನಡುವೆಯೂ ಜನರು ಹೆಚ್ಚಿನ ಪ್ರಯಾಣ ದರ ಪಾವತಿಸಬೇಕಾಗಿದೆ ಎಂದು ಆರೋಪಿಸಿದರು.
ಬೆಂಗಳೂರು ಮಹಾನಗರದಲ್ಲಿ ಕಸ ಸಂಗ್ರಹಿಸುವ ಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಇಡೀ ಬೆಂಗಳೂರು ಕಸದ ನಗರವಾಗಿ ಮಾರ್ಪಟ್ಟಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಎಂಬುದಕ್ಕೆ ವಿಧಾನಸಭೆಯಲ್ಲಿ ಹಣಕಾಸು ಇಲಾಖೆಯ ಪತ್ರವನ್ನೇ ಪ್ರದರ್ಶಿಸಿದ್ದೇನೆ. ವಿತ್ತೀಯ ಕೊರತೆಯ ಮಿತಿಯು ಶೇ.2.94ರ ಮಟ್ಟ ತಲುಪಿದ್ದು, ಇನ್ನು ಸಾಲ ಪಡೆಯುವುದೂ ಕಷ್ಟ ಎಂಬ ಸ್ಥಿತಿಯನ್ನು ಹಣಕಾಸು ಇಲಾಖೆಯೇ ತಿಳಿಸಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಓಲೈಕೆ ಆರೋಪ
ಅಲ್ಪಸಂಖ್ಯಾತ ಸಮುದಾಯದ 5,000 ವಿದ್ಯಾರ್ಥಿಗಳಿಗೆ ತಲಾ ₹50,000 ನೇರ ನಗದು ವರ್ಗಾವಣೆ ಮೂಲಕ ನೀಡುವ ಪ್ರಸ್ತಾವನೆ ಸಚಿವ ಸಂಪುಟದ ಮುಂದಿದೆ. ಹಾಗಾದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಗತಿಯೇನು? ಒಕ್ಕಲಿಗ, ಲಿಂಗಾಯತ, ಬಂಟ, ಬಿಲ್ಲವ ಸೇರಿದಂತೆ ಇತರ ಸಮುದಾಯಗಳ ವಿದ್ಯಾರ್ಥಿಗಳೂ ಮಕ್ಕಳಲ್ಲವೇ? ಒಂದೇ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ನೀಡುವುದು ಯಾವ ನ್ಯಾಯ? ಇದು ಸ್ಪಷ್ಟವಾದ ಮತಬ್ಯಾಂಕ್ ರಾಜಕಾರಣ ಎಂದು ಟೀಕಿಸಿದರು.
ಉರ್ದು ಶಾಲೆಗಳ ಅಭಿವೃದ್ಧಿಗೆ ₹100 ಕೋಟಿ, ಇಮಾಮ್‌ಗಳಿಗೆ ₹6,000 ಗೌರವಧನ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ₹30 ಲಕ್ಷದವರೆಗೆ ನೆರವು ನೀಡುವ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಆದರೆ ಎಲ್ಲ ಸಮುದಾಯದ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳು ಮಳೆ ಬಂದರೆ ಸೋರುತ್ತಿವೆ. ಅವುಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನವನ್ನು ಶೇ.50ರಿಂದ ಶೇ.80ರವರೆಗೆ ಕಡಿತಗೊಳಿಸಲಾಗಿದೆ. ಗೋವಿನ ನಿಗಮಕ್ಕೆ ಬಿಜೆಪಿ ಸರ್ಕಾರ ₹100 ಕೋಟಿ ನೀಡಿದ್ದರೆ ಈಗಿನ ಸರ್ಕಾರ ₹50 ಕೋಟಿ ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ₹200 ಕೋಟಿ ನೀಡಿದ್ದರೆ ಈಗ ₹100 ಕೋಟಿಗೆ ಇಳಿಸಲಾಗಿದೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ವಿವಿಧ ನಿಗಮಗಳ ಅನುದಾನದಲ್ಲೂ ಕಡಿತ ಮಾಡಲಾಗಿದೆ. ಆದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಜೆಟ್ ಮಾತ್ರ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದರು.
2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಜೆಟ್ ₹3,409 ಕೋಟಿ ಇದ್ದು, 2025-26ರಲ್ಲಿ ₹4,535 ಕೋಟಿಗೆ ಹಾಗೂ 2026-27ರಲ್ಲಿ ₹4,762 ಕೋಟಿಗೆ ಏರಿಕೆಯಾಗಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಶೇ.33ರಷ್ಟು ಹೆಚ್ಚಳವಾಗಿದೆ. ಇತರ ಸಮುದಾಯಗಳ ಅಭಿವೃದ್ಧಿ ನಿಗಮಗಳ ಅನುದಾನ ಕಡಿತಗೊಳಿಸಿ, ಅಲ್ಪಸಂಖ್ಯಾತರ ಅನುದಾನ ಹೆಚ್ಚಿಸುವುದು ಯಾವ ಮಾನದಂಡದ ಆಧಾರದಲ್ಲಿ ಎಂದು ಪ್ರಶ್ನಿಸಿದರು.
ಸಂಪುಟದ ಔತಣಕೂಟಕ್ಕೆ ಬಹಿಷ್ಕಾರ
ಗುರುವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆಗೂ ಮುನ್ನ ಆಯೋಜಿಸಲಾಗಿದ್ದ ಔತಣಕೂಟಕ್ಕೆ ತಾನು ಹೋಗುವುದಿಲ್ಲ ಎಂದು ಆರ್. ಅಶೋಕ್ ತಿಳಿಸಿದರು. ಬಡ ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸಲು ಸಾಧ್ಯವಾಗದ ಸರ್ಕಾರದ ಔತಣಕೂಟದಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಹೀಗಾಗಿ ಅದನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಮತ್ತು ಚುನಾವಣಾ ಭರವಸೆಗಳಿಗೂ ವಾಸ್ತವಕ್ಕೂ ಇರುವ ಅಂತರವನ್ನು ಜನರ ಮುಂದಿಡಲು ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಮಂಗಳೂರು ವಿಭಾಗದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸರ್ಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ಜನರಿಗೆ ತಿಳಿಸುವ ಅಭಿಯಾನ ನಡೆಸಲಾಗುತ್ತಿದೆ. ಇತ್ತೀಚಿನ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಜನರು ನೀಡಿದ ಎಚ್ಚರಿಕೆಯಾಗಿದೆ. ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಸಮುದಾಯಗಳನ್ನು ಕಡೆಗಣಿಸುವ ನೀತಿಯನ್ನು ಕಾಂಗ್ರೆಸ್ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್. ಅಶೋಕ್ ಎಚ್ಚರಿಸಿದರು.