ಗೋವಾ ಕರಾವಳಿಯಲ್ಲಿ ಕರ್ನಾಟಕದ ಮೀನುಗಾರರಿಗೆ ಕಿರುಕುಳ ಆರೋಪ: ಲಕ್ಷಾಂತರ ರೂ. ದಂಡ, ಮೀನುಗಳೂ ವಶಕ್ಕೆ: ಮಂಗಳೂರಿನ ಮೀನುಗಾರರ ಆಕ್ರೋಶ
ಮಂಗಳೂರು: ಗೋವಾ ಕರಾವಳಿಯಲ್ಲಿ ಕರ್ನಾಟಕದ ಮೀನುಗಾರಿಕಾ ಬೋಟ್‌ಗಳಿಗೆ ಗೋವಾ ಕರಾವಳಿ ಭದ್ರತಾ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿಯಮದಂತೆ 12 ನಾಟೆಕಲ್ ಮೈಲು ವ್ಯಾಪ್ತಿಯಿಂದ ಹೊರಗೆ ಮೀನುಗಾರಿಕೆ ನಡೆಸುತ್ತಿದ್ದರೂ ಕರ್ನಾಟಕದ ಬೋಟ್‌ಗಳನ್ನು ತಡೆದು ಲಕ್ಷಾಂತರ ರೂ. ದಂಡ ವಿಧಿಸಲಾಗುತ್ತಿದೆ ಎಂದು ಮಂಗಳೂರಿನ ಮೀನುಗಾರರು ಆರೋಪಿಸಿದ್ದಾರೆ.
ಗೋವಾ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಕರ್ನಾಟಕದ ಮೀನುಗಾರಿಕಾ ಬೋಟ್‌ಗಳಿಂದ ಭಾರೀ ದಂಡ ವಸೂಲಿ ಮಾಡುವುದಲ್ಲದೆ, ಮೀನುಗಾರರು ಹಿಡಿದ ಮೀನುಗಳನ್ನೂ ವಶಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಈಗಾಗಲೇ ಕೇರಳದ ಗಡಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕರ್ನಾಟಕದ ಮೀನುಗಾರರಿಗೆ ಇದೀಗ ಗೋವಾ ಕರಾವಳಿಯಲ್ಲೂ ಸಂಕಷ್ಟ ಎದುರಾಗಿದೆ. ಗೋವಾ ಪೊಲೀಸರ ಕ್ರಮಕ್ಕೆ ಕೇರಳದ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಸಹಕರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ವಿಚಾರದಲ್ಲಿ ರಾಜ್ಯ ಸರಕಾರ ಮತ್ತು ಮೀನುಗಾರಿಕಾ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರಕಾರ ಮಧ್ಯಪ್ರವೇಶಿಸಿ ಗೋವಾ ಅಧಿಕಾರಿಗಳ ಕಿರುಕುಳಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿವಾದ ಮುಂದುವರಿದರೆ ಆಳ ಸಮುದ್ರದಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾ ಮೀನುಗಾರರ ನಡುವೆ ಸಂಘರ್ಷ ಉಂಟಾಗುವ ಆತಂಕವೂ ವ್ಯಕ್ತವಾಗಿದೆ.