ಭಾರತ ಸಂವಿಧಾನವನ್ನು ಚಾಲ್ತಿಗೆ ತರುವಲ್ಲಿ ಶಾಸಕಾಂಗಗಳು ಎಡವಿದೆ: ಪಿ. ರಂಜನ್ ರಾವ್

ಭಾರತ ಸಂವಿಧಾನವನ್ನು ಚಾಲ್ತಿಗೆ ತರುವಲ್ಲಿ ಶಾಸಕಾಂಗಗಳು ಎಡವಿದೆ: ಪಿ. ರಂಜನ್ ರಾವ್


ಮಂಗಳೂರು: ಮೌಲ್ಯಯುತವಾದ ಮತ್ತು ಜನತೆಗೆ ಭದ್ರತೆಯನ್ನು ಕಲ್ಪಿಸುವ ಸಂವಿಧಾನವು ಅಸ್ತಿತ್ವದಲ್ಲಿದ್ದರೂ ಅದನ್ನು ಚಾಲ್ತಿಗೆ ತರುವಲ್ಲಿ ಭಾರತದ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಯು ಎಡವಿದೆ ಎಂದು ಹಿರಿಯ ವಕೀಲ ಪಿ. ರಂಜನ್ ರಾವ್ ಹೇಳಿದರು.

ಅವರು ನ.14 ರಂದು ಅಖಿಲ ಭಾರತ ವಕೀಲರ ಒಕ್ಕೂಟ ಎಐಎಲ್‌ಯುನ ವಿಷೇಶ ಉಪನ್ಯಾಸವು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ವಿಷೇಶ ಉಪನ್ಯಾಸ ನೀಡಿದರು. 

ಸಂವಿಧಾನವು ಎಲ್ಲಾ ಧರ್ಮಗಂಥಗಳಿಗಿಂತಲೂ ಅತಿ ಶ್ರೇಷ್ಠವಾದ ಗ್ರಂಥ. ಭಾರತೀಯರೆಲ್ಲರೂ ನಿತ್ಯ ನೆನಪಿಸಿಕೊಳ್ಳಬೇಕಾದ ಗ್ರಂಥ ಒಂದಿದ್ದರೆ ಅದು ಭಾರತ ಸಂವಿಧಾನ. ಇಂತಹ ಸಂವಿಧಾನವನ್ನು ರಚಿಸುವ ಕಾರ್ಯ ಸುಲಭದ್ದಾಗಿರಲಿಲ್ಲ. ವಿಭಿನ್ನ ಧರ್ಮ, ಸಿದ್ದಾಂತದ ಮೇಲೆ ಪ್ರೀತಿ ಹೊಂದಿರುವ ಜನ ಸಮುದಾಯದ ನಾಯಕರುಗಳಾದ ಸರದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್, ಜವಹರಲಾಲ್ ನೆಹರು ಮೊದಲಾದವರ ಮುತುವರ್ಜಿಯಲ್ಲಿ ಜಾತ್ಯತೀತ, ಧರ್ಮ ನಿರಪೇಕ್ಷ ಸಂವಿಧಾನವು ಭಾರತದಲ್ಲಿ ಅಸ್ತಿತ್ವಕ್ಕೆ ಬಂತು ಎಂದರು.

ಸಂವಿಧಾನದ ಮೂಲಧ್ಯೇಯಕ್ಕೆ ದಕ್ಕೆಯಾದಾಗ ನ್ಯಾಯಾಲಯವು ಸಂವಿಧಾನದ ಮೂಲ ಧ್ಯೆಯವನ್ನು ರಕ್ಷಿಸಬೇಕಾಗಿದೆ. ನ್ಯಾಯಾಂಗಕ್ಕೆ ವಿಮರ್ಶೆಯ ಹಕ್ಕನ್ನು ಭಾರತದ ಸಂವಿದಾನವು ನೀಡಿದೆ.ಶಾಸಕಾಂಗದಲ್ಲಿ ರಚನೆಯಾಗುವ ಕಾನೂನುಗಳು ಸಂವಿಧಾನದ ಮೂಲ ಆಶಯಕ್ಕೆ ಚ್ಯುತಿಯನ್ನುಂಟು ಮಾಡಿದಾಗ ಅದನ್ನು ಖಂಡಿಸುವ ಹಕ್ಕು ನ್ಯಾಯಾಲಯಕ್ಕೆ ಇದೆ. ಭಾರತೀಯರು ಪ್ರಜಾಪ್ರಭುತ್ವ ದೇಶದವರಾಗಿ ಕಾನೂನುಗಳಿಂದ ಆಳಲ್ಪಡುತ್ತಿದ್ದೇವೆ. ಸಂವಿಧಾನವು ನೀಡಿರುವ ಧಾರ್ಮಿಕ ಹಕ್ಕು ನಮಗೆ ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕನ್ನು ನೀಡಿದೆ. ನಮ್ಮ ಧಾರ್ಮಿಕತೆಯನ್ನು ನಾವು ಪೂಜಿಸುವಾಗ ಇತರ ದೂಷಿಸಬೇಕೆಂದಿಲ್ಲ. ಆದರೆ ಶಾಸಕಾಂಗದ ಪ್ರಾಬಲ್ಯಗಳು ನ್ಯಾಯಾಂಗದ ಪ್ರಾಮುಖ್ಯತೆಯನ್ನು ಕಸಿದುಕೊಳ್ಳುತ್ತಿವೆ. ತುರ್ತು ಪರಿಸ್ಥಿತಿಯ ಕಾಲಘಟ್ಟ ಮತ್ತು ಬಾಬರಿ ಮಸೀದಿಯ ತೀರ್ಪಿನ ಸಂದರ್ಭದಲ್ಲಿ ನ್ಯಾಯಾಲಯಗಳು ತಮ್ಮ ದೇಶದ ನ್ಯಾಯಾಲಯಕ್ಕೆ ಇರುವ ಅಂತರಾಷ್ಟ್ರೀಯ ಮಾನ್ಯತೆಯನ್ನು ಕಳೆದುಕೊಂಡಿತು. ನ್ಯಾಯಾಧೀಶರು ತಾವು ನ್ಯಾಯಾಧೀಶರೇನಿಸಿಕೊಂಡ ಮೇಲೆ ಸಾಮಾನ್ಯರಿಗಿರುವ ಭಾವನಾತ್ಮಕ ಸೆಳೆತಗಳಿಂದ ದೂರವಿದ್ದು ನಿಸ್ಪಕ್ಷಪಾತ ನ್ಯಾಯದಾನ ನೀಡಬೇಕು ಎಂದರು.

ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆಯು ಪ್ರತಿಬಾರಿಯೂ ನಡೆಯುತ್ತಿರುವುದು ಖೇದಕರ. ಅದು ಸಂವಿಧಾನ ವಿರುದ್ಧವಾದುದು ಅಲ್ಪಸಂಖ್ಯಾತರು ಪದೇ ಪದೇ ತಮ್ಮ ದೇಶ ಪ್ರೇಮವನ್ನು ಸಾಬೀತುಪಡಿಸಿಕೊಳ್ಳಬೇಕಾಗಿಲ್ಲ ಎಂದರು.

ಹಿರಿಯ ವಕೀಲ ಬಿ.ಎ. ಮೊಹಮ್ಮದ್ ಹನೀಫ್ ಮಾತನಾಡಿ, ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡಿದರೆ ಜೈಲಿಗಟ್ಟುವ ಪರಿಸ್ಥಿತಿ ಭಾರತದಲ್ಲಿ ಇದೆ. ಕಾನೂನು ವ್ಯವಸ್ಥೆಗಳಲ್ಲಿ ಪ್ರಬಲ ಸಮುದಾಯಗಳ ಪ್ರತಿನಿದ್ಯದಿಂದ ತುಳಿ ತಕ್ಕೊಳಗಾದ ಸಮುದಾಯಗಳ ನೋವಿಗೆ ಸ್ಪಂದನವೇ ಇಲ್ಲವಾಗಿದೆ. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿಯೂ ಸರಿಸಮಾನ ಮೀಸಲಾತಿಗಳು ಜಾರಿಗೆ ಬರಬೇಕು. ನ್ಯಾಯಾಧೀಶರಾಗುವ ಅವಕಾಶಗಳು ಎಲ್ಲಾ ಸಮುದಾಯಗಳಿಗೂ ದೊರಕಬೇಕು ಎಂದರು.

ವಕೀಲ ಪ್ರವೀಣ್ ಪಿಂಟೋ ಮಾತನಾಡಿ, ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಗೆ ಪ್ರತೀ ನಾಗರೀಕರ ಮೇಲೂ ಇದೆ. ಸಂವಿಧಾನದ ವಿಧಿ 142 ನ್ಯಾಯಾಲಯಗಳಿಗೆ ಯಾವುದೇ ತುರ್ತಿನ ಸಂದರ್ಭದಲ್ಲಿ ಆಜ್ಞೆಗಳನ್ನು ಹೊರಡಿಸುವ ಹಕ್ಕನ್ನು ನೀಡಿದೆ. ಅದರೆ ಭಾರತದ ಗೋದ್ರಾ ದುರಂತ, ಮನಿಪುರ ಗಲಬೆ ಮತ್ತು ಎಸ್‌ಐಆರ್ ಮೊದಲಾದ ಸಂದರ್ಭದಲ್ಲಿ ಭಾರತೀಯ ನ್ಯಾಯಾಲಯಗಳು ಸಂವಿಧಾನ ಪ್ರದತ್ತ ವಿಧಿ 142 ರಂತೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸದೆ ಇರುವುದು ಖೇದಕರ ಎಂದರು.

ಸಮಾವೇಶವನ್ನು ಉದ್ಘಾಟಿಸಿ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಸವರಾಜ್ ಕೋರಿಮಠ ಮಾತನಾಡಿ, ವಕೀಲರ ಹುದ್ದೆಯು ಸಮಾಜದ ಗೌರವಾನ್ವಿತ ಹುದ್ದೆಯಾಗಿದ್ದು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ವಕೀಲರು ಮಾಡಬೇಕು. ವಕೀಲರು ನಿತ್ಯದ ಜನರ ಬದುಕಿನ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಇಂದಿನ ಆಧುನಿಕ ಎಐ ಜಾಲದಲ್ಲಿ ವಕೀಲರು ಸಿಲುಕಿಕೊಂಡು ಜ್ಞಾನಾರ್ಜನೆಯ ಮಟ್ಟವನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಯಶವಂತ ಮರೋಳಿ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ್ ಬಿ.ಪಿ., ಸಂತ ಅಲೋಶಿಯಸ್ ಪರಿಗಣೆತ ವಿಶ್ವ ವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ದಿನೇಶ್ ನಾಯಕ್, ವಕೀಲರಾದ ಶಾಲಿನಿ ಮನೋಹರ್, ನಿತಿನ್ ಕುತ್ತಾರ್, ಚರಣ್ ಶೆಟ್ಟಿ ಪಂಜಿಮೊಗರು, ಮನೋಜ್ ವಾಮಂಜೂರು, ರಾಮಚಂದ್ರ ಬಬ್ಬುಕಟ್ಟೆ, ದಿನೇಶ್ ಉಳಿಪಾಡಿ, ಬಿ.ಎಂ. ಭಟ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article