ದೇಶದ ಚುನಾವಣಾ ವ್ಯವಸ್ಥೆಯ ಪಾವಿತ್ರ್ಯ ಕಾಪಾಡಲು ಎಸ್‌ಐಆರ್ ಅಗತ್ಯ: ಗೌರವ್ ಭಾಟಿಯಾ

ದೇಶದ ಚುನಾವಣಾ ವ್ಯವಸ್ಥೆಯ ಪಾವಿತ್ರ್ಯ ಕಾಪಾಡಲು ಎಸ್‌ಐಆರ್ ಅಗತ್ಯ: ಗೌರವ್ ಭಾಟಿಯಾ


ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂವಿಧಾನಬದ್ಧ ಪ್ರಕ್ರಿಯೆಯಾಗಿದ್ದು, ದೇಶದ ಚುನಾವಣಾ ವ್ಯವಸ್ಥೆಯ ಪಾವಿತ್ರ್ಯ ಕಾಪಾಡಲು ಇದು ಅಗತ್ಯವಾಗಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಎಸ್‌ಐಆರ್ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದರು.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಜೆರೆಮಿ ಕಾರ್ಬಿನ್ ಸೇರಿದಂತೆ ವಿದೇಶಿ  ಶಕ್ತಿಗಳೊಂದಿಗೆ ಕೈಜೋಡಿಸಿರುವವರು ಭಾರತದ ಅಭಿವೃದ್ಧಿ ಮತ್ತು ಸ್ಥಿರತೆಯನ್ನು ಸಹಿಸಿಕೊಳ್ಳುತ್ತಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವದ ಮೂಲಕವೇ ಅಧಿಕಾರ ಬದಲಾವಣೆಯಾಗುತ್ತದೆ. ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಲ್ಲಿ ನಡೆದಂತೆ ಹಿಂಸಾತ್ಮಕ ತಖ್ತಾಪಲಟ್ ಮೂಲಕವಲ್ಲ. ಸಂವಿಧಾನಬದ್ಧ ಸಂಸ್ಥೆಗಳಿಗೆ ಬೆಂಕಿ  ಹಚ್ಚುವುದು, ಅವುಗಳನ್ನು ಹಾನಿಗೊಳಿಸುವುದು ಪ್ರಜಾಪ್ರಭುತ್ವದ ಮಾರ್ಗವಲ್ಲ ಎಂದು ಟೀಕಿಸಿದರು.

ಎಸ್‌ಐಆರ್ ಪ್ರಕ್ರಿಯೆ ಬಿಜೆಪಿ ಕಂಡುಹಿಡಿದ ಹೊಸ ವ್ಯವಸ್ಥೆಯಲ್ಲ. ಈ ಹಿಂದೆ ದೇಶದಲ್ಲಿ 12 ಬಾರಿ ಇಂತಹ ಪರಿಷ್ಕರಣೆ ನಡೆದಿದೆ. ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷ ನ್ 21(3)ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರವಿದೆ. ಅನರ್ಹರು, ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ  ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡವರನ್ನು ಪಟ್ಟಿಯಿಂದ ಕೈಬಿಡುವುದು ಕಾನೂನುಬದ್ಧ ಪ್ರಕ್ರಿಯೆಯಾಗಿದೆ ಎಂದರು.

ಸುಪ್ರೀಂ ಕೋರ್ಟ್ ಕೂಡ ಬಿಹಾರದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಗೆ ತಡೆ ನೀಡಿಲ್ಲ. ಚುನಾವಣಾ ಆಯೋಗಕ್ಕೆ ಈ ಪ್ರಕ್ರಿಯೆ ನಡೆಸುವ ಅಧಿಕಾರವಿದೆ ಎಂಬುದನ್ನು  ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಿರುವಾಗ ಎಸ್‌ಐಆರ್ ಅಸಂವಿಧಾನಿಕ ಎಂದು ಹೇಳಲು ರಾಹುಲ್ ಗಾಂಧಿ ಯಾರು ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಬಗ್ಗೆ  ಮೊದಲು ಅರಿವು ಬೆಳೆಸಿಕೊಂಡು ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಎಸ್‌ಐಆರ್ ಮೂಲಕ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂಬ ಅಂಕಿಅಂಶಗಳನ್ನು ಮುಂದಿಟ್ಟ ಗೌರವ್ ಭಾಟಿಯಾ, ಇದರಲ್ಲಿ  6.30 ಕೋಟಿ ಮಂದಿ ತಮ್ಮ ಶಾಶ್ವತ ವಿಳಾಸದಿಂದ ಬೇರೆಡೆಗೆ ಸ್ಥಳಾಂತರಗೊಂಡವರು, ಮೂರು ಕೋಟಿ ಮಂದಿ ಪರಿಶೀಲನೆ ಸಂದರ್ಭದಲ್ಲಿ ವಿಳಾಸದಲ್ಲಿ ಲಭ್ಯ ವಿಲ್ಲದವರು, 2.80 ಕೋಟಿ ಮಂದಿ ಮೃತಪಟ್ಟವರು ಹಾಗೂ ಒಂದು ಕೋಟಿ ಮಂದಿ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು  ಎಂದು ವಿವರಿಸಿದರು. ಇಂತಹ ಹೆಸರುಗಳನ್ನು ಪರಿಶೀಲಿಸಿ ಅನರ್ಹ ಮತದಾರರನ್ನು ಕೈಬಿಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಭಾರತದ ಸಂವಿಧಾನವು ದೇಶದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು ನೀಡಿದೆ. ವಿದೇಶಿ ಅಕ್ರಮ ವಲಸಿಗರಿಗೆ ಭಾರತೀಯ ನಾಗರಿಕರಂತೆ ಮತದಾನದ ಹಕ್ಕು  ನೀಡಲು ಸಾಧ್ಯವಿಲ್ಲ. ಮತದಾನದ ಹಕ್ಕು ಅತ್ಯಂತ ಅಮೂಲ್ಯವಾದದ್ದು. ಅದನ್ನು ಕೇವಲ ಭಾರತೀಯ ನಾಗರಿಕರು ಮಾತ್ರ ಚಲಾಯಿಸಬೇಕು. ಅಕ್ರಮ ವಲಸಿಗರು  ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದರೆ ಅವರನ್ನು ಗುರುತಿಸಿ ಕೈಬಿಡುವುದು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವದ ದೃಷ್ಟಿಯಿಂದಲೂ ಅಗತ್ಯವಾಗಿದೆ ಎಂದರು.

ಕಾಂಗ್ರೆಸ್‌ನ ದ್ವಂದ್ವ ನಿಲುವನ್ನು ಪ್ರಶ್ನಿಸಿದ ಅವರು, ಕೇರಳ ಮುಖ್ಯಮಂತ್ರಿ ಎಸ್‌ಐಆರ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳುತ್ತಾರೆ. ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಕೂಡ ಎಸ್‌ಐಆರ್ ಸಂವಿಧಾನಬದ್ಧ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ರಾಹುಲ್ ಗಾಂಧಿ ಮಾತ್ರ ಅದನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್  ಆಡಳಿತವಿರುವ ರಾಜ್ಯಗಳಲ್ಲಿ ಎಸ್‌ಐಆರ್ ಒಪ್ಪಿಗೆಯಾದರೆ, ಬಿಜೆಪಿ ಗೆಲ್ಲುವ ರಾಜ್ಯಗಳಲ್ಲಿ ಅದು ಅಸಂವಿಧಾನಿಕವಾಗುತ್ತದೆಯೇ ಎಂದು ಪ್ರಶ್ನಿಸಿದರು.

2014ರಿಂದ 2025ರವರೆಗೆ ಕಾಂಗ್ರೆಸ್ 25 ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಯಾವುದೇ ರಾಜ್ಯದಲ್ಲಿ  ಸತತ ಎರಡು ಬಾರಿ ಅಧಿಕಾರಕ್ಕೆ ಬಂದಿಲ್ಲ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಪ್ರಾಬಲ್ಯ  ಕಳೆದುಕೊಂಡಿದೆ. ಈ ಸೋಲುಗಳಿಗೆ ಇವಿಎಂ ಅಥವಾ ಚುನಾವಣಾ ಆಯೋಗವನ್ನು ಹೊಣೆ ಮಾಡದೆ ಪಕ್ಷದ ನಾಯಕತ್ವ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಕಾಂಗ್ರೆಸ್ ನಾಯಕರಿಗೆ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನು ನೆನಪಿಸಿದ ಅವರು, 2018ರ  ಅಕ್ಟೋಬರ್ 12ರಂದು ಕಮಲ್‌ನಾಥ್ ಮತ್ತು ಚುನಾವಣಾ ಆಯೋಗದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವು ನಿಷ್ಪಕ್ಷಪಾತ ಸಂಸ್ಥೆಯಾಗಿ  ಕಾರ್ಯನಿರ್ವಹಿಸುತ್ತಿದೆ ಮತ್ತು ದೇಶದ ಜನರು ಅದರ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು ಎಂದರು.

ಅದೇ ರೀತಿ 2024ರ ಏಪ್ರಿಲ್ 26ರಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಚುನಾವಣಾ ಆಯೋಗದ ನಡುವಿನ ಪ್ರಕರಣದಲ್ಲಿ ಕೇವಲ ಅನುಮಾನ ಮತ್ತು ಊಹಾಪೋಹಗಳ ಆಧಾರದಲ್ಲಿ ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಉಲ್ಲೇಖಿಸಿದರು.

ಚುನಾವಣಾ ಆಯೋಗದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಜನರ ವಿಶ್ವಾಸ  ಕುಂದಿಸುವ ಪ್ರಯತ್ನ ಮಾಡುತ್ತಿದೆ. ಸಂವಿಧಾನ ಮತ್ತು ಚುನಾವಣಾ ವ್ಯವಸ್ಥೆಯ ರಕ್ಷಣೆಗಾಗಿ ಬಿಜೆಪಿ ಜನರ ಮುಂದೆ ವಾಸ್ತವಾಂಶಗಳನ್ನು ಇಡಲಿದೆ. ಈ ನಿಟ್ಟಿನಲ್ಲಿ  ದೇಶಾದ್ಯಂತ ’ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಅಭಿಯಾನದ ಭಾಗವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತಿದೆ ಎಂದು ಗೌರವ್ ಭಾಟಿಯಾ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಕ್ಯಾ.ಗಣೇಶ್ ಕಾರ್ಣಿಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಪ್ರೇಮಾ ನಂದ ಶೆಟ್ಟಿ, ಯತೀಶ್ ಆರ್ವಾರ್, ಭಾರತೀಶ್, ವಸಂಜ ಪೂಜಾರಿ, ಪ್ರಸನ್ನ ದರ್ಭೆ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article