ಬೆಂಗಳೂರು-ಮಂಗಳೂರು-ಮಡ್‌ಗಾಂವ್ ರೈಲಿಗೆ ಚಾಲನೆ

ಬೆಂಗಳೂರು-ಮಂಗಳೂರು-ಮಡ್‌ಗಾಂವ್ ರೈಲಿಗೆ ಚಾಲನೆ

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಅಭಿವೃದ್ಧಿಗೆ 94 ಕೋಟಿ ಅನುದಾನ: ಸಚಿವ ಅಶ್ವಿನಿ ವೈಷ್ಣವ್ 


ಮಂಗಳೂರು: ರಾಜಧಾನಿ ಬೆಂಗಳೂರನ್ನು ಕರಾವಳಿಯ ಮಂಗಳೂರು, ಉಡುಪಿ, ಕಾರವಾರ ಮೂಲಕ ಗೋವಾದ ಮಡಗಾಂವ್‌ನೊಂದಿಗೆ ಸಂಪರ್ಕಿಸುವ ಬಹುನಿರೀಕ್ಷಿತ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೇ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಂಗಳೂರು-ಬೆಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಬಹುಕಾಲದ ಕನಸಾಗಿತ್ತು. ಕಾಮಗಾರಿ ಅನುಷ್ಠಾನದ ವೇಳೆ ಹಲವು ಸವಾಲುಗಳು ಎದುರಾದರೂ ಎಲ್ಲ ಅಡೆತಡೆಗಳನ್ನು ಯಶಸ್ವಿಯಾಗಿ ನಿವಾರಿಸಿ ಇಂದು ವಿದ್ಯುದೀಕೃತ ರೈಲು ಸಂಚಾರ ಆರಂಭಿಸಿರುವುದು ಸಂತಸದ ವಿಚಾರ ಎಂದು ಹೇಳಿದರು.

ವಿದ್ಯುದೀಕರಣಗೊಂಡ ರೈಲಿನಲ್ಲಿ ತಾವು ಬೆಂಗಳೂರಿಗೆ ಪ್ರಯಾಣಿಸಲಿರುವುದಾಗಿ ತಿಳಿಸಿದ ಅವರು, ಈ ಯೋಜನೆ ಸಾಕಾರಗೊಳ್ಳಲು ಶ್ರಮಿಸಿದ ರೈಲ್ವೆ ಅಧಿಕಾರಿಗಳನ್ನು ಅಭಿನಂದಿಸಿದರು.

ಬೆಂಗಳೂರು ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಸೇರ್ಪಡೆಯಾಗುವಲ್ಲಿ ನಿರಂತರ ಪ್ರಯತ್ನ ನಡೆಸಿದ ರೈಲ್ವೆ ಅಧಿಕಾರಿ ರಾಜೇಶ್ ಚಂದ್ರ ಅವರ ಕಾರ್ಯವನ್ನು ವಿಶೇಷವಾಗಿ ಶ್ಲಾಘಿಸಿದ ಸಚಿವರು, ಅವರ ಕೊಡುಗೆಗಾಗಿ ಧನ್ಯವಾದ ಸಲ್ಲಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಜನಪರ ಕಾಳಜಿ ಮತ್ತು ರೈಲ್ವೆ ಅಭಿವೃದ್ಧಿಗಾಗಿ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನೂ ಪ್ರಶಂಸಿಸಿದರು. ಗುಂಡ್ಮಿ ರೈಲು ನಿಲ್ದಾಣದ ಬೇಡಿಕೆ ಈಡೇರುವವರೆಗೂ ಅವರು ಸಮಾಧಾನಗೊಂಡಿರಲಿಲ್ಲ. ನಿಲ್ದಾಣದ ಬೇಡಿಕೆ ಈಡೇರಿದ ಬಳಿಕವಷ್ಟೇ ಸಂತಸ ವ್ಯಕ್ತಪಡಿಸಿದ್ದರು ಎಂದು ಸಚಿವರು ಅವರ ಬದ್ಧತೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಾಕಿ ಇರುವ ರೈಲ್ವೆ ಮೇಲ್ಸೇತುವೆ (ROB), ಕೆಳಸೇತುವೆ (RUB) ನಿರ್ಮಾಣ ಹಾಗೂ ಲೆವೆಲ್ ಕ್

ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳನ್ನು ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಅಭಿವೃದ್ಧಿಗಾಗಿ 94 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.

ರೈಲ್ವೆ ಸಂಪರ್ಕ, ಮೂಲಸೌಕರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಆದ್ಯತೆ ನೀಡುತ್ತಿದ್ದು, ಕರಾವಳಿ ಭಾಗದ ರೈಲ್ವೆ ವ್ಯವಸ್ಥೆಯನ್ನು ಮತ್ತಷ್ಟು ಉನ್ನತೀಕರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಕರಾಚಳಿ ಜನತೆಗೆ ನೀಡಿದ ದೀಪಾವಳಿ ಉಡುಗೊರೆ ಇದು. ಕರಾವಳಿ ಜನರ ಪಾಲಿಗೆ ಇದೊಂದು ಐತಿಹಾಸಿಕ ದಿನ. ಪಶ್ಚಿಮ ಘಟ್ಟದ ಹಸಿರು ತಾಣದ ಮಧ್ಯೆ ವಂದೇ ಭಾರತ್ ಕೇಸರಿ ರೈಲು ಇನ್ನು ಸಂಚರಿಸಲಿದೆ. ಇದನ್ನು ಸಾಕಾರಗೊಳಿಸಿದ ತುಳುನಾಡಿನ ಬಂಧು ನರೇಂದ್ರ ಮೋದಿ ಹಾಗೂ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಕರಾವಳಿ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಮಂಗಳೂರಿನ ರೈಲ್ವೆ ಹಳಿಗಳು ಕೊಂಕಣ ರೈಲ್ವೆ ದಕ್ಷಿಣ ರೈಲ್ವೆ ಹಾಗೂ ನೈರುತ್ಯ ರೈಲ್ವೆ ನಡುವೆ ಹಂಚಿ ಹೋಗಿದ್ದವು. ಕಾರ್ಯಾಚರಣೆ ದೃಷ್ಟಿಯಿಂದಲೂ ಇದು ಗೊಂದಲಕ್ಕೆ ಕಾರಣವಾಗಿತ್ತು. ಅವೆಲ್ಲವನ್ನು ಒಂದೇ ವಿಭಾಗದಡಿ ತರಬೇಕು ಎಂಬ ಇಲ್ಲಿನ ಜನರ ಬೇಡಿಕೆ ಈಡೇರಿಸುವುದು ಸುಲಭದ ಕೆಲಸ ಆಗಿರಲಿಲ್ಲ. ಆದರೆ ಸಚಿವ ಅಶ್ವಿನಿ ವೈಷ್ಣವ್ ಅವರಿಂದಾಗಿ ಇದು ಸಾಕಾರವಾಗಿದೆ. ರೈಲ್ವೆಯಲ್ಲಿ ಮಂಗಳೂರು ಆದ್ಯತೆ ವಲಯವಾಗಿ ಮೂಡಿಬಂದಿದೆ‘ ಎಂದರು. 

‘ಮಂಗಳೂರು -ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಮರು ಚಾಲನೆ ನೀಡಿದ್ದು ರೈಲ್ವೆ ಸಚಿವರ ಇನ್ನೊಂದು ಮಹತ್ತರ ನಿರ್ಧಾರ. ಸುಬ್ರಹ್ಮಣ್ಯ ರೋಡ್ - ಸಕಲೇಶಪುರ ನಡುವಿನ ಹಳಿ ವಿದ್ಯುದೀಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಸುಮಾರು  100 ಕೋಟಿ ವೆಚ್ಚದ ಈ ಯೋಜನೆ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಸುಬ್ರಹ್ಮಣ್ಯ ರೋಡ್ ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಯಡಿ ೨೫ ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು, ಇದನ್ನೂ ಇಂದು ಲೋಕಾರ್ಪಣೆಗೊಳಿಸಲಾಗುತ್ತಿದೆ’ ಎಂದರು

‘ನಾನು, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,  ‘ಮೋದಿ ಅವರು ಪ್ರಧಾಬಿ ಆದ ಬಳಿಕ ರೈಲು ಯೋಜನೆಗಳಿಗೆ ವೇಗ ದೊರಕಿದೆ. ನಿತ್ಯ 100 ಕೋಟಿ ಜನ ರೈಲಿನಲ್ಲಿ ಪ್ರಯಾಣಿಸುವಂತಾಗಿದೆ’ ಎಂದರು. 

ಶಾಸಕ ವೇದವ್ಯಾಸ ಕಾಮತ್, ‘ಇಲ್ಲಿಂದ ಗೋವಾ ಹಾಗೂ ಬೆಂಗಳೂರನ್ನು ಶೀಘ್ರವಾಗಿ ತಲುಪುವ ಕನಸು ನನಸಾಗುತ್ತಿದೆ. ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ ಸಮಸ್ಯೆ ಇತ್ಯರ್ಥಕ್ಕೆ ದೆಹಲಿಯಿಂದ ವಿಶೇಷ ತಂಡವನ್ನು ಕಳುಹಿಸುವುದಾಗಿ ಕೇಂದ್ರ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ’ ಎಂದರು.

ಶಾಸಕರಾದ ಭಾಗಿರಥಿ ಮುರುಳ್ಯ, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮತ್ತಿತರರು ಭಾಗವಹಿಸಿದ್ದರು, 

ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬೆಂಗಳೂರು, ಕರಾವಳಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ಆಧುನಿಕ, ವೇಗದ ಮತ್ತು ಆರಾಮದಾಯಕ ರೈಲು ಸಂಪರ್ಕವನ್ನು ಒದಗಿಸಲಿದೆ. 

ಯಶವಂತಪುರದಿಂದ ಸಂಚರಿಸುವ ಈ ರೈಲು, ಮಡಗಾಂವ್ ತಲುಪುವವರೆಗಿನ ಸುಮಾರು 850 ಕಿ.ಮೀ. ಉದ್ದದ ಮಾರ್ಗದಲ್ಲಿ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಮಂಗಳೂರು, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ.

ಈ ಹೊಸ ರೈಲು ಸೇವೆಯಿಂದ ಬೆಂಗಳೂರು ನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲದೆ, ದಕ್ಷಿಣ ಗೋವಾದ ಪ್ರಯಾಣಿಕರಿಗೂ ಇದರಿಂದ ಅನುಕೂಲವಾಗಲಿದೆ. ಕರಾವಳಿ ಕರ್ನಾಟಕ ಮತ್ತು ಗೋವಾದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಸುಧಾರಿಸುವ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೂ ಸಹಕಾರಿ ಆಗಲಿದೆ ಎಅಮದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article