73ನೇ ಸಹಕಾರ ಸಪ್ತಾಹ-2026: ಮಂಗಳೂರಿನಲ್ಲಿ 20ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್,
ಪ್ರತಿ ವರ್ಷ ನ. 14ರಿಂದ 20 ರವರೆಗೆ “ಸಹಕಾರ ಸಪ್ತಾಹ” ನಡೆಯುತ್ತದೆ. ಪಂಡಿತ್ ನೆಹರೂರವರಜನ್ಮದಿನವಾದ ನವೆಂಬರ್ ೧೪ರಂದು ಸಪ್ತಾಹದಉದ್ಘಾಟನೆ ನಡೆಸಲಾಗುತ್ತದೆ.
ಸಪ್ತಾಹದ ಅವಧಿಯಲ್ಲಿ ಸಹಕಾರ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಸಿ ಭವಿಷ್ಯದ ಸಹಕಾರಿ ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಚಿಂತನೆ ನಡೆಸುವುದೇ ಸಹಕಾರಿ ಸಪ್ತಾಹದ ಮುಖ್ಯ ಉದ್ದೇಶವಾಗಿದೆ ಎಂದರು.
ರಾಜ್ಯ ಮಟ್ಟದ ಕಾರ್ಯಕ್ರಮ:
‘ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವ ಶಾಂತಿಗಾಗಿ ಸಹಕಾರ ಸಂಸ್ಥೆಗಳು’ ಎಂಬ ವಿಷಯದೊಂದಿಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನ.20ರ ಪೂರ್ವಾಹ್ನ 10ಕ್ಕೆ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಉದ್ಘಾಟಿಸುವರು. ‘ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ’ವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಫರೀದ್ ನೆರವೇರಿಸುವರು.‘ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ”ವನ್ನು ಶಾಸಕ, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡಇವರು ನೆರವೇರಿಸುವರು.
ಉತ್ತಮ ಸ್ವ-ಸಹಾಯ ಸಂಘ”ಗಳಿಗೆ ಪುರಸ್ಕಾರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಸ್ತು ಪ್ರದರ್ಶನ ಮಳಿಗೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟg ನೆರವೇರಿಸುವರು. ಸಹಕಾರ ಸಪ್ತಾಹದ ಧ್ವಜಾರೋಹಣವನ್ನು ಶಾಸಕ ಡಿ. ವೇದವ್ಯಾಸ ಕಾಮತ್ ನೆರವೇರಿಸುವರು.ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್‌ರವರು ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ. ಸೋಜಾ, ಕಿಶೋರ್ ಕುಮಾರ್ ಬೊಟ್ಯಾಡಿ, ಶಾಸಕರಾದ ಡಾ. ಭರತತ್ ಶೆಟ್ಟಿ ವೈ., ಯಶ್‌ಪಾಲ್ ಎ. ಸುವರ್ಣ, ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಗೌರವ ಉಪಸ್ಥಿತರಿರುವರು.
‘ಸಹಕಾರ ಮಾಣಿಕ್ಯ ಪ್ರಶಸ್ತಿ’:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸುವ ಉದ್ದೇಶದಿಂದ 2024ನೇ ಸಾಲಿನಿಂದ ಸಹಕಾರ ಸಪ್ತಾಹದ ರಾಜ್ಯಮಟ್ಟದ ಸಮಾರಂಭದಲ್ಲಿ ‘ಸಹಕಾರ ಮಾಣಿಕ್ಯ ಪ್ರಶಸ್ತಿ’ಯನ್ನು ನೀಡಲು ನಿರ್ಧರಿಸಲಾಗಿದ್ದು, ಈ ಬಾರಿಯೂ 2025-26ರಲ್ಲಿ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಿ ಆಯ್ಕೆಗೊಂಡ 4 ಸಹಕಾರಿ ಸಂಘಗಳಿಗೆ ‘ಸಹಕಾರ ಮಾಣಿಕ್ಯ ಪ್ರಶಸ್ತಿ’ಯ ಜೊತೆಗೆ 5 ಗ್ರಾಂ ಚಿನ್ನದ ಪದಕ, ರೂ.10,000 ನಗದು ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಗುವುದು.
ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ:
ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು, ಮಹಿಳಾ ಸಹಕಾರಿ ಸಂಘಗಳು, ಹೈನುಗಾರಿಕೆ ಸಹಕಾರಿ ಸಂಘಗಳು, ಮೀನುಗಾರಿಕಾ ಸಹಕಾರಿ ಸಂಘಗಳು, ಕ್ರೆಡಿಟ್ ಸೊಸೈಟಿಗಳು, ಸೌಹಾರ್ದ ಸಹಕಾರಿ ಸಂಘಗಳಿಗೆ ಹಾಗೂ ಟಿಎಪಿಸಿಎಂಎಸ್ ಮತ್ತು ಶತಮಾನೋತ್ಸವ ಪೂರೈಸಿದ ಸಂಘಗಳನ್ನು ಗೌರವಿಸಲಾಗುವುದು.
ಉತ್ತಮ ಸ್ವ-ಸಹಾಯ ಸಂಘಗಳಿಗೆ ಪುರಸ್ಕಾರ:
ಸಹಕಾರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನವೋದಯ ಸ್ವ-ಸಹಾಯ ಗುಂಪುಗಳು ಬಡಜನರಆರ್ಥಿಕ ಶಕ್ತಿಯಾಗಿ ಕೆಲಸ ಮಾಡುತ್ತಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 35,000 ಕ್ಕೂ ಅಧಿಕ ನವೋದಯ ಸ್ವ-ಸಹಾಯ ಗುಂಪುಗಳಿದ್ದು, ಸಹಕಾರ ಸಪ್ತಾಹದಆಚರಣೆಯ ಸಂದರ್ಭದಲ್ಲಿ ಉಭಯ ಜಿಲ್ಲೆಗಳ ಅತ್ಯುತ್ತಮ ಸ್ವ-ಸಹಾಯ ಗುಂಪುಗಳನ್ನು ಪುರಸ್ಕರಿಸಲಾಗುವುದು.
ಸಹಕಾರಿ ಸಪ್ತಾಹದ ಸಂದರ್ಭದಲ್ಲಿ ಪ್ರತೀವರ್ಷದಂತೆ ಈ ಬಾರಿಯೂ ಪತ್ರಿಕಾ ರಂಗದಲ್ಲಿ ಒಬ್ಬರನ್ನು ಮತ್ತು ಮೂಡುಬಿದಿರೆ ತರಬೇತಿ ಕೇಂದ್ರದಲ್ಲಿ ರ‍್ಯಾಂಕ್ ವಿಜೇತ ಇಬ್ಬರನ್ನು ಗುರುತಿಸಿ ಗೌರವಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಮುಖದಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಬ್ಯಾಂಕದ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಜಯರಾಜ ಶೆಟ್ಟಿ ಉಪಸ್ಥಿತರಿದ್ದರು.