ಜೈನಕಾಶಿಯ 18 ಬಸದಿಗಳಲ್ಲಿ ವಿಶೇಷ ಧಾರ್ಮಿಕ ಕಾಯ೯ಕ್ರಮಗಳು
Tuesday, November 10, 2026
ಮೂಡುಬಿದಿರೆ: ಭಗವಾನ್ ಮಹಾವೀರ ಸ್ವಾಮಿ ನಾಲ್ಕು ಅಘಾತಿ ಕರ್ಮಗಳನ್ನು ಕ್ಷಯಿಸಿ ಮೋಕ್ಷ ಪಡೆದ ಶುಭದಿನದ ಅಂಗವಾಗಿ ಸೋಮವಾರ ಮೂಡುಬಿದಿರೆ ಜೈನಕಾಶಿಯ 18 ಬಸದಿಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಸ್ವಾಮೀಜಿ ಅವರು 24 ತೀರ್ಥಂಕರರ ಹೆಸರುಗಳನ್ನು ಸ್ಮರಿಸಿ ಮಹಾ ಅರ್ಘ್ಯ ಸಮರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ಬೆಟ್ಕೇರಿ ಭಗವಾನ್ ಮಹಾವೀರ ಸ್ವಾಮಿ ಬಸದಿಯ ಸಾಮೂಹಿಕ ಅರ್ಘ್ಯಾವಳಿಯಲ್ಲಿ ಪಾಲ್ಗೊಂಡರು.
ಮೂಡುಬಿದಿರೆಯ ಎಲ್ಲಾ 18 ಬಸದಿಗಳಲ್ಲಿ ಶ್ರಾವಕ-ಶ್ರಾವಿಕೆಯರು ಸೂರ್ಯೋದಯಕ್ಕೂ ಮುನ್ನ ವೀರಭಕ್ತಿ, ಅಭಿಷೇಕ, ಅಷ್ಟವಿಧಾರ್ಚನೆ ನೆರವೇರಿಸಿ ಮಹಾ ಅರ್ಘ್ಯ ಸಮರ್ಪಿಸಿದರು.
ಆಶೀರ್ವಚನ ನೀಡಿದ ಸ್ವಾಮೀಜಿ, ಆತ್ಮವು ಪರಮಾತ್ಮನ ಅವಸ್ಥೆ ತಲುಪಲು ಹಲವು ಭವಗಳ ತಪಸ್ಸು ಅಗತ್ಯ. ಸಂಪೂರ್ಣ ಕರ್ಮಗಳನ್ನು ಕ್ಷಯಿಸಿ ತಪಸ್ಸಿನಲ್ಲಿ ನಿರತರಾದ ಪುಣ್ಯಾತ್ಮರಿಗೆ ಮಾತ್ರ ಪರಮಪದವಿ ಸಾಧ್ಯ. ವೀತರಾಗ ಸರ್ವಜ್ಞ ಭಗವಂತರ ಉಪದೇಶದಿಂದ ಲೋಕಕಲ್ಯಾಣ ಮತ್ತು ಶಾಂತಿ ಸಾಧ್ಯ ಎಂದು ತಿಳಿಸಿದರು. ಅಜ್ಞಾನದ ಕತ್ತಲೆ ಸರಿಸಿ ಸುಜ್ಞಾನದ ಬೆಳಕು ನೀಡುವ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.
ಮುಂಬೈ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಹಾಗೂ ನಾಗಾಲ್ಯಾಂಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತಾದಿಗಳು ಬಸದಿ ದರ್ಶನ, ಪೂಜೆ, ಪ್ರವಚನ ಮತ್ತು ಸತ್ಸಂಗದಲ್ಲಿ ಪಾಲ್ಗೊಂಡರು.
