ಸಂತ ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ‘ಫಿಲೋ ವೇವ್ಸ್-2026’ ಉದ್ಘಾಟನೆ

ಸಂತ ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ‘ಫಿಲೋ ವೇವ್ಸ್-2026’ ಉದ್ಘಾಟನೆ


ಪುತ್ತೂರು: ವಿಜ್ಞಾನದ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗಿರದೆ, ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಮಾಡಬೇಕು ಎಂದು ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕ್ಲೆಮೆಂಟ್ ಪಿಂಟೋ ಹೇಳಿದರು.


ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ವಿಜ್ಞಾನ ವಿಭಾಗದ ವಿಜ್ಞಾನ ವೇದಿಕೆ ಹಾಗೂ ಇಕೋ ಕ್ಲಬ್ ಇದರ ಸಹಯೋಗದೊಂದಿಗೆ ನ.12 ರಂದು ಕಾಲೇಜು ಸಭಾಂಗಣದಲ್ಲಿ ‘ಫಿಲೋ ವೇವ್ಸ್-2026’ ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಪ್ರಕೃತಿ ನಮ್ಮ ಸ್ವತ್ತಲ್ಲ. ಪ್ರಕೃತಿಯ ಮೇಲೆ ಕಾಳಜಿ, ಜವಾಬ್ದಾರಿಯನ್ನು ತೆಗೆದುಕೊಂಡು ಅದರ ರಕ್ಷಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಗುಣ ಹೊಂದಿರಬೇಕು. ಒಪ್ಪಿಕೊಳ್ಳುವ, ನಿರ್ಧರಿಸುವ ಮತ್ತು ಪ್ರತಿಕ್ರಿಯಿಸುವ ಮೊದಲು ಆಲೋಚಿಸಿ. ವಿದ್ಯಾರ್ಥಿಗಳು ಕಲಿಯಲು, ಯೋಚಿಸಲು ಹಾಗೂ ಬದಲಾವಣೆಯನ್ನು ಬಯಸಲು ಸಿದ್ದರಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ವಿಜ್ಞಾನ ನಮ್ಮ ದಿನ ನಿತ್ಯದ ಕಾರ್ಯಗಳಲ್ಲಿ ಹಾಸುಹೊಕ್ಕಗಿದ್ದು, ವೈಜ್ಞಾನಿಕ ಯೋಚನೆಗಳಿಂದ ಮಾತ್ರ ವಿಜ್ಞಾನದ ಪರಿಕಲ್ಪನೆಯನ್ನು ಗುರುತಿಸಲು ಸಾಧ್ಯ. ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದ ಅವರು ಪ್ರಕೃತಿಯನ್ನು ಕುತೂಹಲದ ದೃಷ್ಟಿಯಿಂದ ನೋಡಿದಾಗ ವೈಜ್ಞಾನಿಕ ಕಲ್ಪನೆಗಳು ನಮಗೆ ಮನನವಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ.ಡಿ. ಹಾಗೂ ವಿಜ್ಞಾನ ವೇದಿಕೆ ಹಾಗೂ ಇಕೋ ಕ್ಲಬ್‌ನ ನಿರ್ದೇಶಕರಾದ ಶಿಲ್ಪಾ ಎಮಿಲ ರೋಡ್ರಿಗಸ್, ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜ್ಞಾನದ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪೋಸ್ಟರ್ ತಯಾರಿಕೆ, ವಿಜ್ಞಾನ ಛಾಯಾಗ್ರಹಣ, ವಿಜ್ಞಾನ ಮಾದರಿ ತಯಾರಿ, ವಿಜ್ಞಾನ ವಿಷಯಾಧಾರಿತ ಚರ್ಚಾ ಸ್ಪರ್ಧೆ (ಪರ-ವಿರೋಧ ವಾದ ಮಂಡನೆ), ವಿಜ್ಞಾನ ಆಧಾರಿತ ಫ್ಯಾಷನ್ ಶೋ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ.ಡಿ ಸ್ವಾಗತಿಸಿ, ವಿದ್ಯಾರ್ಥಿಗಳಾದ ಕಥೀಜತುಲ್ ಶೈಮ ವಂದಿಸಿ, ಜೀವಿತಾ ಕೆ.ಜೆ. ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article