ಜಿಲ್ಲೆಯಲ್ಲಿ ಬ್ಯಾನರ್ ರಾಜಕೀಯ ನಿಲ್ಲಬೇಕು: ಬೂಡಿಯಾರ್ ರಾಧಾಕೃಷ್ಣ ರೈ

ಜಿಲ್ಲೆಯಲ್ಲಿ ಬ್ಯಾನರ್ ರಾಜಕೀಯ ನಿಲ್ಲಬೇಕು: ಬೂಡಿಯಾರ್ ರಾಧಾಕೃಷ್ಣ ರೈ


ಪುತ್ತೂರು: ಪುತ್ತೂರಿನಲ್ಲಿ ಕಾಮಗಾರಿ ನಡೆಯುವುದಕ್ಕೆ ಹಲವು ತಿಂಗಳ ಮೊದಲೇ ತೆಂಗಿನಕಾಯಿ ಒಡೆದು ಸಣ್ಣ ಅನುದಾನಕ್ಕೂ ಬ್ಯಾನರ್ ಹಾಕಿ ದೊಡ್ಡ ಪ್ರಚಾರ ತೆಗೆದುಕೊಳ್ಳಲಾಗುತ್ತಿದ್ದು, ಕೇಂದ್ರದ ಅನುದಾನವನ್ನೂ ರಾಜ್ಯಸರ್ಕಾರದ್ದು ಎಂದು ಬಿಂಬಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಬ್ಯಾನರ್ ರಾಜಕೀಯ ನಿಲ್ಲಬೇಕು ಎಂದು ಜಿಲ್ಲಾ ಬಿಜೆಪಿಯ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಹೋರಾಟದ ಸಹಸಂಚಾಲಕ ರಾಧಾಕೃಷ್ಣ ರೈ ಬೂಡಿಯಾರ್ ಹೇಳಿದರು.

ಅವರು ಬುಧವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಅಧಿಕಾರ ದರ್ಪ ತೋರಿಸುವ ಹಾಗೂ ಏಕವಚನದಲ್ಲಿ ಮಾತನಾಡುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಟೀಕೆಗಳ ಸಾಮಾನ್ಯ ಅದನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯವನ್ನೇ ಮಾರುವ ಸ್ಥಿತಿ:

ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಹೋರಾಟವನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಗ್ರಾಮಮಟ್ಟದ ಈ ಆಂದೋಲನ ಶೇ.50 ರಷ್ಟು ಪೂರ್ಣಗೊಂಡಿದೆ. ಜನಪರ ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ರಾಜ್ಯ ಸರ್ಕಾರ ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಅಧಿಕಾರಕ್ಕೆ ಬಂದ ಬಳಿಕ 3 ಬಾರಿ ಬಸ್ಸು ದರವನ್ನು ಏರಿಸಿದ್ದು, ಹಾಲಿನ ದರವನ್ನು 8 ರೂ. ಏರಿಸಿ ಅದನ್ನು ಸಂಪೂರ್ಣ ರೈತರಿಗೆ ನೀಡದೆ 1 ರೂ.ಗಳನ್ನು ಹಾಲು ಒಕ್ಕೂಟಗಳಿಗೆ ಉಳಿಸಿಕೊಳ್ಳುತ್ತಿದೆ. ಬರ ಪೀಡಿತ ತಾಲೂಕಿನ ರೈತರಿಗೆ 5 ಎಕರೆಗೆ ಬರೀ 5 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದು, ರೈತರಿಗೆ ಫಸಲ್ ಭಿಮಾ ಯೋಜನೆಯಲ್ಲೂ ವಂಚಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಒಂದೂವರೆ ವರ್ಷ ಸರ್ಕಾರ ಮುಂದುವರಿದರೆ ರಾಜ್ಯವನ್ನೇ ಮಾರುವ ಸ್ಥಿತಿ ನಿರ್ಮಾಣವಾಗಲಿದೆ ಎಂದರು. 

ಅಭಿವೃದ್ಧಿ ಕೆಲಸದ ಪ್ರಗತಿಪರಿಶೀಲನೆಯ ಕೆಡಿಪಿ ಸಭೆ ಪುತ್ತೂರಿನಲ್ಲಿ ನಡೆಯುತ್ತಿಲ್ಲ. ಪುತ್ತೂರು ಮೆಸ್ಕಾಂನಲ್ಲಿ ಬರೀ 4 ಮಂದಿ ಗುತ್ತಿಗೆದಾರರಿಗೆ ಟೆಂಡರ್ ಸೀಮಿತವಾಗಿದ್ದು, ಅದರಲ್ಲಿ ಓರ್ವ ಅಧಿಕಾರಿಯ ಪತ್ನಿಯ ಹೆಸರಿನಲ್ಲೂ ಕಾಮಗಾರಿ ನಡೆಸಲಾಗುತ್ತಿದೆ. ಪುತ್ತೂರು ದೇವಸ್ಥಾನದಲ್ಲೂ ಭ್ರಷ್ಟಾಚಾರ ಮಾಡಲಾಗುತ್ತಿದ್ದು, ಅದನ್ನು ಪ್ರಶ್ನೆ ಮಾಡಿದರೆ ದರ್ಪದಿಂದ ಮಾತನಾಡುತ್ತಿದ್ದಾರೆ. ಕುರಿಯ ಗ್ರಾಮದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಆರೋಪಿಯೋರ್ವ ಬಂಧನವಾಗಿ ಒಂದೇ ದಿನದಲ್ಲಿ ಹೊರಗೆ ಬಂದಿದ್ದು, ಇದರ ಹಿಂದೆ ಇರುವವರು ಯಾರು ಎಂಬುದು ತಿಳಿಯಬೇಕಿದೆ. ಈ ಎಲ್ಲಾ ಗೊಂದಲಗಳಿಗೆ ಉತ್ತರವಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪುತ್ತೂರಿನಲ್ಲಿ ಬಿಜೆಪಿ ಶಾಸಕರು ಗೆದ್ದು ಬರಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯನ್ನು ಪುತ್ತೂರು ಬಿಜೆಪಿ ಪ್ರಮುಖರಾದ ಹರಿಪ್ರಸಾದ್ ಯಾದವ್, ವಿರೂಪಾಕ್ಷ ಭಟ್, ನಿರಂಜನ್ ಮಾನ್ಯ, ಹರೀಶ್ ಬಿಜತ್ರೆ, ನಿತೇಶ್ ಕುಮಾರ್ ಶಾಂತಿವನ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article