ಗೃಹಲಕ್ಷ್ಮಿ ಯೋಜನೆಯ ಪರಿಶೀಲನೆ ಆರಂಭ-ನೈಜಫಲಾನುಭವಿಗಳಿಗೆ ಸಮಸ್ಯೆಯಾಗಬಾರದು: ಉಮಾನಾಥ ಶೆಟ್ಟಿ ಪೆರ್ನೆ
ಅವರು ಬುಧವಾರ ತಾಪಂ ಗ್ಯಾರಂಟಿ ಅನುಷ್ಟಾನ ಸಮಿತಿ ಕಾರ್ಯಾಲಯದಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಆದೇಶದಂತೆ ಈಗಾಗಲೇ ಗೃಹಜ್ಯೋತಿ ಯೋಜನೆಯ ಪರಿಶೀಲನಾ ಕಾರ್ಯ ನಡೆಸಲಾಗಿದೆ. ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ಪಡಿತರಚೀಟಿಯ ಇ-ಕೆವೈಸಿ ಕಾರ್ಯ ನಡೆಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಪರಿಶೀಲನೆ ನಡೆಯಲಿದ್ದು, ಇದರಿಂದ ಯಾವುದೇ ನೈಜ ಫಲಾನುಭವಿಗಳಿಗೆ ಸಮಸ್ಯೆಯಾಗುವುದಿಲ್ಲ. ಈ ಕಾರ್ಯಕ್ಕಾಗಿ ಮೊದಲ ಹಂತದ ತರಬೇತಿ ನಡೆದಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಅಂಗನವಾಡಿ ಕಾರ್ಯಕರ್ತೆಯರಿಗೂ ತರಬೇತಿ ನಡೆಯಲಿದೆ ಎಂದು ತಿಳಿಸಿದರು.
ಪಂಚಗ್ಯಾರಂಟಿ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸಲು ಗ್ರಾಮಪಂಚಾಯತ್ ಮಟ್ಟದ ಸಮಿತಿಗಳು ರಚನೆಯಾಗಲಿವೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ಈಗಾಗಲೇ ಒಟ್ಟು ೩೩ ಕಂತುಗಳು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಕಳೆದ ೩ ತಿಂಗಳ ಕಂತು ಬಾಕಿಯಾಗಿತ್ತು. ಇದೀಗ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳ ಹಣ ಪ್ರತೀ ಗೃಹಲಕ್ಷ್ಮಿ ಫಲಾನುಭವಿಗೆ ರೂ.೬ ಸಾವಿರ ಏಕಕಂತಿನಲ್ಲಿ ಜಮಾ ಗೊಳ್ಳಲಿದೆ. ಈಗಾಗಲೇ ಸರ್ಕಾರದಿಂದ ಹಣ ಬಂದಿದೆ. ಈ ಬಗ್ಗೆ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಅವರು ಹೇಳಿದರು.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿ ಪುತ್ತೂರಿನ ೬೦ ಸಾವಿರ ಫಲಾನುಭವಿಗಳ ಪೈಕಿ ೯೦ ಶೇ.ದಷ್ಟು ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಪರಿಶೀಲನೆ ಬಾಕಿ ಇರುವ ಪುತ್ತೂರಿನ ಮೆಸ್ಕಾಂ ಪ್ರತಿ ಉಪವಿಭಾಗದ ಮಟ್ಟದ ಪಟ್ಟಿಯನ್ನು ನೀಡುವಂತೆ ಅಧ್ಯಕ್ಷರು ಮೆಸ್ಕಾಂ ಎಇಇ ರಾಜೇಶ್ ಅವರಿಗೆ ಸೂಚಿಸಿದರು.
ನೋಟೀಸು ನೀಡಿ:
ತಾಲೂಕಿನ ಹಿರೇಬಂಡಾಡಿ ನ್ಯಾಯ ಬೆಲೆ ಅಂಗಡಿಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅಧಿಕಾರಿಗಳು ಅದರ ಕುರಿತು ಗಮನಹರಿಸಬೇಕು ಎಂದು ಅನುಷ್ಠಾನ ಸಮಿತಿ ಸದಸ್ಯ ಸೇಸಪ್ಪ ನೆಕ್ಕಿಲು ಅವರು ಒತ್ತಾಯಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧ್ಯಕ್ಷರು ಆಹಾರ ಇಲಾಖೆಯ ಅಧಿಕಾರಿ ಸರಸ್ವತಿ ಅವರಿಗೆ ಸೂಚಿಸಿದರು.
ಕಟ್ಟಡ ಶಿಥಿಲಗೊಂಡಿದ್ದರೆ ಅದನ್ನು ದುರಸ್ತಿ ಮಾಡುವ ಕಾರ್ಯವನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರೇ ಮಾಡಬೇಕಾಗುತ್ತದೆ. ದುರಸ್ತಿಯನ್ನು ಇಲಾಖೆ ಮಾಡುವುದಕ್ಕೆ ಆಗುವುದಿಲ್ಲ, ಶಿಥಿಲವಿದ್ದರೆ ನೋಟಿಸ್ ಕೊಡುವ ಕಾರ್ಯವನ್ನು ಇಲಾಖೆ ಮಾಡಬೇಕು. ಪ್ರತಿ ನ್ಯಾಯ ಬೆಲೆ ಅಂಗಡಿಗಳ ಸ್ಥಿತಿಯನ್ನು ಪರಿಶೀಲನೆ ನಡೆಸುವಂತೆ ತಾನು ಆರಂಭದಿಂದಲೂ ಅಧಿಕಾರಿಗಳಿಗೆ ಸೂಚಿಸುತ್ತಿದ್ದೇವೆ. ಅಕ್ಕಿ ಲೋಡ್ ಬರುವ ಸಂದರ್ಭದಲ್ಲಿ ಅದು ನೆಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಜತೆಗೆ ಬಿದ್ದ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಣೆ ಮಾಡದಂತೆ ಪರಿಶೀಲಿಸುವಂತೆ ಪ್ರತಿ ಬಾರಿಯೂ ಹೇಳಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು.
ಸಮಿತಿ ಸದಸ್ಯ ಕಾರ್ಯದರ್ಶಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು. ಸಭೆಯಲ್ಲಿ ಕೆಎಸ್ಸಾರ್ಟಿಸಿ ಡಿಪೋ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಹರೀಶ್, ಸದಸ್ಯರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅಬ್ಬು ನವಗ್ರಾಮ, ವಿಜಯಲಕ್ಷ್ಮಿ, ಬಬಿತಾ, ವಿಶ್ವಜಿತ್, ಫಾರೂಕ್ ಪೆರ್ನೆ ಭಾಗವಹಿಸಿದ್ದರು.