ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗೆ ಜನಾಗ್ರಹ: ಅರಸಿನಮಕ್ಕಿಯಲ್ಲಿ ವಾಹನ ಜಾಥಾ, ಬೃಹತ್ ಹಕ್ಕೊತ್ತಾಯ ಸಮಾವೇಶ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿಗೆ ವೇಗ ನೀಡಬೇಕು. ಈ ಭಾಗದ ಜನರ ಸಂಚಾರ, ಆರೋಗ್ಯ, ಕೃಷಿ ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಬೇಕು ಎಂಬ ಒತ್ತಾಯ ಸಮಾವೇಶದಲ್ಲಿ ವ್ಯಕ್ತವಾಯಿತು. ಸಮಾವೇಶಕ್ಕೂ ಮೊದಲು ಅರಸಿನಮಕ್ಕಿ ಪರಿಸರದ ಏಳು ಗ್ರಾಮಗಳ ಗ್ರಾಮಸ್ಥರಿಂದ ಅರಸಿನಮಕ್ಕಿ ಆಟದ ಮೈದಾನದಿಂದ ಹಕ್ಕೊತ್ತಾಯ ಸಮಾವೇಶ ಸ್ಥಳದ ವರೆಗೆ ವಾಹನ ಜಾಥಾ ನಡೆಯಿತು.
ಜಾಥಾಗೆ ಚಾಲನೆ ನೀಡಿದ ಮಾಜಿ ಸಚಿವ ಬಿ.ಬಿ. ಲಿಂಗಯ್ಯ ಮಾತನಾಡಿ, ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗಾಗಿ ಈ ಹಿಂದೆಯೂ ಸಾಕಷ್ಟು ಪ್ರಯತ್ನಗಳು ಹಾಗೂ ಹೋರಾಟಗಳು ನಡೆದಿವೆ. ರಾಜಕೀಯ ನಾಯಕರು ಕೂಡ ಬೆಂಬಲ ಸೂಚಿಸಿದ್ದರು, ರಸ್ತೆ ಅಭಿವೃದ್ಧಿಯ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದೆ. ಆದರೆ, ಈವರೆಗೆ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ರಸ್ತೆ ಅಭಿವೃದ್ಧಿ ಯಾವುದೇ ಜಾತಿ ಅಥವಾ ರಾಜಕೀಯಕ್ಕೆ ಸೀಮಿತವಾದ ವಿಚಾರವಲ್ಲ. ಈ ಭಾಗದ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಯಾಗಿರುವುದರಿಂದ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.
ರಸ್ತೆ ಆದಷ್ಟು ಬೇಗ ಅಭಿವೃದ್ಧಿಗೊಂಡರೆ ಎರಡೂ ಭಾಗದ ಜನರ ಬದುಕು ಹಸನಾಗಲಿದೆ. ಸಂಚಾರದ ಸಮಸ್ಯೆ ಕಡಿಮೆಯಾಗುವುದರೊಂದಿಗೆ ಜನರ ದೈನಂದಿನ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಹೀಗಾಗಿ ರಸ್ತೆ ಅಭಿವೃದ್ಧಿಯ ಬೇಡಿಕೆಗೆ ಎಲ್ಲರೂ ಒಗ್ಗಟ್ಟಿನ ಧ್ವನಿ ನೀಡಬೇಕು ಎಂದು ಅವರು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಜನರ ಒಗ್ಗಟ್ಟು ಮತ್ತು ಶಕ್ತಿಯನ್ನು ತೋರಿಸುವ ಮೂಲಕ ಶಿಶಿಲ-ಬೈರಾಪುರ ಭಾಗದ ಗ್ರಾಮಸ್ಥರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹೋರಾಟ ರಸ್ತೆ ಅಭಿವೃದ್ಧಿಯ ಯಶಸ್ಸಿಗೆ ನಾಂದಿಯಾಗಲಿದೆ ಎಂಬ ವಿಶ್ವಾಸವಿದೆ. ಅರಣ್ಯ ಹಕ್ಕು ಕಾಯ್ದೆ ಹಾಗೂ ಅರಣ್ಯಕ್ಕೆ ಸಂಬಂಧಿಸಿದ ನಿಯಮಗಳಿಂದ ರಸ್ತೆ, ಮನೆ ಮತ್ತು ಜಾಗ ಮಂಜೂರಾತಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ತೊಡಕು ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಗಡಿಯವರೆಗೆ ಸರ್ವೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು. ಎರಡು ಜಿಲ್ಲೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ಕರೆಸಿ ಸಭೆ ನಡೆಸುವ ಅಗತ್ಯವಿದೆ. ಈ ಸಭೆಯಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿ, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಮಲೆನಾಡು ಮತ್ತು ಕರಾವಳಿಯ ನಡುವಿನ ಪ್ರದೇಶದಲ್ಲಿರುವ ಇಲ್ಲಿನ ಜನರು ಎರಡೂ ಭಾಗಗಳ ಅನುಕೂಲಗಳಿಂದ ವಂಚಿತರಾದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಜನರ ಕಷ್ಟಗಳನ್ನು ಪರಿಹರಿಸಲು ರಸ್ತೆ ಅಭಿವೃದ್ಧಿ ಅತ್ಯಗತ್ಯ.ಈ ರಸ್ತೆ ಮಲೆನಾಡು ಮತ್ತು ತುಳುನಾಡನ್ನು ಬೆಸೆಯುವ ಸಂಪರ್ಕ ಕೊಂಡಿಯಾಗಲಿದೆ. ರಸ್ತೆ ಅಭಿವೃದ್ಧಿಗೊಂಡರೆ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದು ಪ್ರಮುಖ ಸಂಪರ್ಕ ಹೆಬ್ಬಾಗಿಲು ತೆರೆದಂತಾಗಲಿದೆ. ಆರೋಗ್ಯ ಸೇವೆ ಸೇರಿದಂತೆ ವಿವಿಧ ಅಗತ್ಯಗಳಿಗೆ ಜನರು ಸುಲಭವಾಗಿ ಸಂಚರಿಸಲು ಸಾಧ್ಯವಾಗಲಿದೆ ಎಂದರು.
ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ, ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗೊಂಡರೆ ಈ ಭಾಗದ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವೇಗ ದೊರೆಯುವುದರೊಂದಿಗೆ ಜನರ ಜೀವನಮಟ್ಟ ಸುಧಾರಿಸಲಿದೆ. ಸಂಚಾರ ಸೌಲಭ್ಯ ಉತ್ತಮಗೊಂಡರೆ ಕೃಷಿ ಉತ್ಪನ್ನಗಳ ಸಾಗಾಟ ಸೇರಿದಂತೆ ಜನರ ದೈನಂದಿನ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ಹೀಗಾಗಿ ರಸ್ತೆ ಅಭಿವೃದ್ಧಿಯ ಮಹತ್ವವನ್ನು ಅರಿತು ಎಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡಬೇಕು ಎಂದು ಹೇಳಿದರು.
ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಪಡಿಸಿ ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಅಭಿವೃದ್ಧಿಗೆ ಒತ್ತಾಯಿಸಿ ಜನಪ್ರತಿನಿಧಿಗಳಿಗೆ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಣ್ಣ ನಿಡ್ವಾಳೆ ಮೂಡಿಗೆರೆ, ಬೆಳ್ತಂಗಡಿ ಸಿ.ಪಿ.ಐ.ಎಂ. ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್, ಕೆ.ಪಿ.ಸಿ.ಸಿ. ಜಿಲ್ಲಾ ಕಾರ್ಯದರ್ಶಿ ಎ.ಸಿ. ಮ್ಯಾಥ್ಯು, ಕರ್ನಾಟಕ ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪ ಗೌಡ್ರು, ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಹಕ್ಕೋತ್ತಾಯ ಸಮಿತಿ ಕಾರ್ಯದರ್ಶಿ ಧರ್ಮರಾಜ್ ಗೌಡ ಅಡ್ಕಾಡಿ, ಚಿಕ್ಕಮಗಳೂರು ಕೆ.ಆರ್.ಆರ್.ಡಿ.ಎ. ನಿವೃತ್ತ ಎ.ಇ.ಇ. ಎಚ್.ಎಂ. ಶಿವಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕೊಕ್ಕಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಕೆಂಪೇಗೌಡ ಒಕ್ಕಲಿಗ ಸಂಘದ ಅಧ್ಯಕ್ಷ ಬಕ್ಕಿ ಪ್ರಸಾದ್, ತಾ.ಪಂ. ಮಾಜಿ ಸದಸ್ಯ ವಾಮನ ತಾಮನ್ಕರ್, ಪ್ರಮುಖರಾದ ಜಯರಾಮ ನೆಲ್ಲಿತ್ತಾಯ, ಸಂಪತ್ ಬಿ. ಸುವರ್ಣ, ಕೊರಗಪ್ಪ ನಾಯ್ಕ್, ಈಶ್ವರ ಬೈರಾ, ನವೀನ್ ನೆರಿಯ, ಉದನೆ ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ನಚಿಕೇತ್, ಸಂತೋಷ್, ಮೋಯಿದ್ದಿನ್, ಸಮಿತ್ರೇ ಗೌಡ ಬೈರಾಪುರ, ಅರಸಿನಮಕ್ಕಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
ರಮೇಶ್ ಬೈರಕಟ್ಟೆ ಹಕ್ಕೋತ್ತಾಯ ವಿಷಯವನ್ನು ಪ್ರಸ್ತಾವಿಸಿದರು. ಶಿಶಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂದೀಪ್ ಶಿಶಿಲ ಸ್ವಾಗತಿಸಿ, ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ವಂದಿಸಿ, ಪ್ರವೀಣ್ ಕುಲಾಲ್ ನಿರೂಪಿಸಿದರು.