ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸಲು ಕೆರೆಗಳ ಅಭಿವೃದ್ಧಿ: ಯು.ಟಿ. ಖಾದರ್
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಪಲ ಮೂರುಕಟ್ಟ ಕೆರೆ, ಅಂಬ್ಲಮೊಗರು ವಾಡಕೆರೆ ಹಾಗೂ ಹರೇಕಳ ರಾಜಗುಡ್ಡೆ ತಾಮರೆ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕುಂಪಲ ಮೂರುಕಟ್ಟೆಯಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ. ಕೆರೆಗಳ ಸುತ್ತ ವಾಕಿಂಗ್ ಪಾತ್ ನಿರ್ಮಾಣ, ಉದ್ಯಾನವನ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಕೆರೆಗಳ ಅಭಿವೃದ್ಧಿಯು ಗ್ರಾಮದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಕುಂಪಲದ ಕೇಂದ್ರ ಭಾಗವಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.
ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಉತ್ತಮ ಮಳೆಯಾಗುತ್ತಿರುವುದು ಸಂತಸದ ವಿಚಾರ. ಈ ಮಳೆಯ ಮೂಲಕ ಅಂತರ್ಜಲ ಹೆಚ್ಚಾಗಿ ಜನರ ನೀರಿನ ಸಮಸ್ಯೆ ಪರಿಹಾರವಾಗಲಿ. ಮುಂದೆಯೂ ನಿರಂತರವಾಗಿ ಉತ್ತಮ ಮಳೆಯಾಗಲಿ ಎಂದು ಹಾರೈಸಿದ ಅವರು ಶುಭ ಸಂದರ್ಭದಲ್ಲಿ ದೇವರ ಆಶೀರ್ವಾದವೂ ನಮ್ಮೊಂದಿಗಿದೆ ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಸೋಮೇಶ್ವರ ಪುರಸಭೆಯ ನಾಮನಿರ್ದೇಶಿತ ಸದಸ್ಯ ಶ್ರೀಧರ್ ಆಳ್ವ, ಪುರಸಭಾ ಸದಸ್ಯರಾದ ಪುರುಷೋತ್ತಮ ಶೆಟ್ಟಿ, ದೀಪಕ್ ಪಿಲಾರ್, ಪರ್ವಿನ್ ಸಾಜಿದ್, ನಾಮನಿರ್ದೇಶಿತ ಸದಸ್ಯ ಪ್ರೇಮನಾಥ್ ಕೊಲ್ಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಶೆಟ್ಟಿ, ನಿರ್ದೇಶಕರಾದ ಮೀರಾ ಜಿ. ಚಂದ್ರಪಾಲ್, ಸಬಿತಾ ಮಿಸ್ಕಿತ್, ಕೇಸರಿ ಮಿತ್ರವೃಂದದ ಅಧ್ಯಕ್ಷ ಸುಧಾಕರ್, ವಾಸುಕಿ ಫ್ರೆಂಡ್ಸ್ ಸರ್ಕಲ್ ಚಿತ್ರಾಂಜಲಿ ನಗರದ ಅಧ್ಯಕ್ಷ ಕಿರಣ್, ಕುಂಪಲ ಶಿವಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ ಹಾಗೂ ವೀರಮಾರುತಿ ವ್ಯಾಯಾಮ ಶಾಲೆಯ ಪ್ರಮುಖ ಉಮೇಶ್ ಉಪಸ್ಥಿತರಿದ್ದರು.
ದಿನೇಶ್ ಕುಂಪಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಅನಾರೋಗ್ಯದಿಂದ ಬಳಲುತ್ತಿರುವ 12 ಕುಟುಂಬಗಳಿಗೆ ಆರ್ಥಿಕ ನೆರವಿನ ಚೆಕ್‌ಗಳನ್ನು ವಿತರಿಸಲಾಯಿತು.