ಸ್ನೇಹ ಎಸ್.ಎಸ್. ಅವರಿಗೆ ಎಸ್‌ಡಿಎಂ ಸಂಸ್ಥೆಯಿಂದ ಗೌರವ

ಸ್ನೇಹ ಎಸ್.ಎಸ್. ಅವರಿಗೆ ಎಸ್‌ಡಿಎಂ ಸಂಸ್ಥೆಯಿಂದ ಗೌರವ


ಉಜಿರೆ: ಇತ್ತೀಚೆಗೆ ನಡೆದ 20ನೇ ಏಷ್ಯನ್ ಗೇಮ್ಸ್‌ನ 4*100 ಮೀಟರ್ ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಅಂತಾ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ತೋರಿ, ದೇಶಕ್ಕೆ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸ್ನೇಹ ಎಸ್.ಎಸ್. ಅವರನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆ ವತಿಯಿಂದ ಗೌರವಿಸುವ ಕಾರ್ಯಕ್ರಮವು ಕಾಲೇಜಿನ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯಿತು.


ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ, ಎಸ್‌ಡಿಎಂ ಕಾಲೇಜು ಹಾಗೂ ಎಸ್‌ಡಿಎಂ ಕ್ರೀಡಾ ಸಂಘದ ವತಿಯಿಂದ ಸ್ನೇಹ ಎಸ್.ಎಸ್. ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಸ್ನೇಹ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಚಾರ್ಯ ನಂದಾ ಕುಮಾರಿ, ಆಡಳಿತ ಕುಲಸಚಿವ ಪ್ರೊ ಶ್ರೀಧರ್ ಎನ್. ಭಟ್, ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ,ಸ್ನೇಹ ಅವರ ಪೋಷಕರು ಹಾಗೂ ಕ್ರೀಡಾ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗಮನಾರ್ಹ ಸಾಧನೆ ಮಾಡಿರುವ ಹಿರಿಯ ವಿದ್ಯಾರ್ಥಿನಿ ಸ್ನೇಹ ಎಸ್.ಎಸ್. 2013 ರಿಂದ 2018 ರವರೆಗೆ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿರುವರು. ಶಿಕ್ಷಣದ ಜೊತೆಗೆ ಕಾಲೇಜಿನಲ್ಲಿ ದೊರೆತ ಕ್ರೀಡಾ ತರಬೇತಿ ಮತ್ತು ಪ್ರೋತ್ಸಾಹದಿಂದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾಧನೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಕೇಂದ್ರ ತೆರಿಗೆ ಇಲಾಖೆಯಲ್ಲಿ ತೆರಿಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಪರ ಜವಾಬ್ದಾರಿಗಳ ನಡುವೆಯೂ ಕ್ರೀಡೆಯಲ್ಲಿ ತಮ್ಮ ಸಾಧನೆಯ ಪಯಣವನ್ನು ಮುಂದುವರಿಸಿರುವುದು ವಿಶೇಷವಾಗಿದೆ.

ಸ್ನೇಹ ಅವರ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ., ಎಸ್‌ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್., ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಶಾರದಾ, ಸುದೀನ್ ಪುಜಾರಿ, ಸಂದೇಶ್ ಪೂಂಜಾ, ಜಶ್ವಂತ್ ಗೌಡ ಹಾಗು ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. 

ಹಲವು ಅಂತಾರಾಷ್ಟ್ರೀಯ ಸಾಧನೆಗಳ ಸಾಧಕಿ:

ಅಂತಾರಾಷ್ಟ್ರೀಯ ಸಾಧನೆಗಳ ಸಾಧಕಿಯಾಗಿರುವ ಸ್ನೇಹ, ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಚೀನಾದಲ್ಲಿ ನಡೆದ 2ನೇ ಏಷ್ಯನ್ ರಿಲೇಸ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ಶಿಪ್ ದಾಖಲೆಯೊಂದಿಗೆ ಚಿನ್ನ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೋಟ್ಸ್‌ವಾನಾದಲ್ಲಿ ನಡೆದ ವರ್ಲ್ಡ್ ರಿಲೇಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ, 100 ಮೀಟರ್ ಓಟವನ್ನು 11.3 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ರಾಜ್ಯದ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ನಡೆದ 20ನೇ ಏಷ್ಯನ್ ಗೇಮ್ಸ್‌ನ 4100 ಮೀಟರ್ ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ತೋರಿ, ದೇಶಕ್ಕೆ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.


ಸ್ನೇಹ ಎಸ್.ಎಸ್. ಅವರು ಅಂತಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿರುವುದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ, ಪ್ರೋತ್ಸಾಹ ಮತ್ತು ಅವಕಾಶಗಳನ್ನು ಒದಗಿಸಿದಾಗ ಅವರು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಸ್ನೇಹ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ. ಶಿಕ್ಷಣದ ಜೊತೆಗೆ ಕ್ರೀಡಾಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಎಸ್‌ಡಿಎಂ ಸಂಸ್ಥೆಗಳು ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ. ಅವರ ಮುಂದಿನ ಕ್ರೀಡಾ ಪಯಣ ಇನ್ನಷ್ಟು ಯಶಸ್ವಿಯಾಗಲಿ ಹಾಗೂ ದೇಶಕ್ಕಾಗಿ ಮತ್ತಷ್ಟು ಪದಕಗಳನ್ನು ಗೆಲ್ಲಲಿ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆ ವತಿಯಿಂದ ಹಾರೈಸುತ್ತೇನೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ತಿಳಿಸಿದರು.

ನನ್ನ ಕ್ರೀಡಾ ಬದುಕಿನ ಆರಂಭಿಕ ಹಂತದಿಂದಲೂ ಎಸ್‌ಡಿಎಂ ಶಿಕ್ಷಣ ಸಂಸ್ಥೆ ನೀಡಿದ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಬೆಂಬಲ ಅತ್ಯಂತ ಮಹತ್ವದ್ದಾಗಿದೆ. ಕಾಲೇಜಿನಲ್ಲಿ ಕಲಿಕೆಯ ಜೊತೆಗೆ ಕ್ರೀಡೆಗೆ ದೊರೆತ ಪ್ರೋತ್ಸಾಹ ಮತ್ತು ತರಬೇತಿಯು ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅಡಿಪಾಯವನ್ನು ರೂಪಿಸಿತು. ನನ್ನ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಅವಕಾಶ ಕಲ್ಪಿಸಿದ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಕ್ರೀಡಾ ತರಬೇತುದಾರರಿಗೆ ನಾನು ಸದಾ ಕೃತಜ್ಞಳಾಗಿದ್ದೇನೆ. ಇಂದು ಸಂಸ್ಥೆಗೆ ಮರಳಿ ಬಂದು ಗೌರವ ಸ್ವೀಕರಿಸುತ್ತಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ. ಎಸ್‌ಡಿಎಂ ಸಂಸ್ಥೆಯ ಪ್ರೋತ್ಸಾಹ ಮತ್ತು ಬೆಂಬಲ ನನ್ನ ಕ್ರೀಡಾ ಪಯಣದಲ್ಲಿ ಸದಾ ಸ್ಮರಣೀಯವಾಗಿರುತ್ತದೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಸ್ನೇಹ ಎಸ್.ಎಸ್. ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article