ರೈತರ ಹಿತದೃಷ್ಟಿಯಿಂದ ಸರ್ಕಾರ ಹಾಲಿನ ದರ ಪರಿಷ್ಕರಣೆ ಮಾಡಿದೆ: ಸುರೇಖಾ ಚಂದ್ರಹಾಸ್

ರೈತರ ಹಿತದೃಷ್ಟಿಯಿಂದ ಸರ್ಕಾರ ಹಾಲಿನ ದರ ಪರಿಷ್ಕರಣೆ ಮಾಡಿದೆ: ಸುರೇಖಾ ಚಂದ್ರಹಾಸ್


ಉಳ್ಳಾಲ: ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ, ನೌಕರರ ಉದ್ಯೋಗ ಭದ್ರತೆ ಹಾಗೂ ಹೈನುಗಾರ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹಾಲಿನ ದರ ಪರಿಷ್ಕರಣೆ ನಿರ್ಧಾರ ಕೈಗೊಂಡಿದೆ. ಡೀಸೆಲ್, ಪೆಟ್ರೋಲ್, ಬಸ್ ನಿರ್ವಹಣೆ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ಸಂಸ್ಥೆಗಳಿಗೆ ಗುಣಮಟ್ಟದ ಸೇವೆ ಮುಂದುವರಿಸಲು ಬಸ್ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಗ್ಯಾರಂಟಿ ಅನುಷ್ಟಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸುರೇಖಾ ಚಂದ್ರಹಾಸ್ ಹೇಳಿದರು.

ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಪ್ರತಿದಿನ ಲಕ್ಷಾಂತರ ಜನರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿವೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳ ನಡುವೆಯೂ ಸಂಸ್ಥೆಗಳು ನಷ್ಟದಲ್ಲಿಯೇ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದು ಕಷ್ಟವಾಗಲಿದೆ. ಸಾರಿಗೆ ಸಂಸ್ಥೆಗಳನ್ನು ಉಳಿಸುವುದು ಎಂದರೆ ಲಕ್ಷಾಂತರ ಪ್ರಯಾಣಿಕರಿಗೆ ದೊರೆಯುವ ಸೇವೆ ಹಾಗೂ ಸಾವಿರಾರು ನೌಕರರ ಉದ್ಯೋಗ ಭದ್ರತೆಯನ್ನು ಕಾಪಾಡುವುದಾಗಿದೆ ಎಂದರು.

ಬಿಜೆಪಿ ನಾಯಕರು ದರ ಏರಿಕೆಯನ್ನು ಟೀಕಿಸುತ್ತಿದ್ದಾರೆ. ಆದರೆ, ಬಿಎಸ್‌ಎನ್‌ಎಲ್ ಸಂಸ್ಥೆಯ ಹಿಂದಿನ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ, ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದ ಹೊರತಂದು ಸ್ಪರ್ಧಾತ್ಮಕವಾಗಿ ಬೆಳೆಸುವ ಅಗತ್ಯ ತಿಳಿಯುತ್ತದೆ. ಅದೇ ರೀತಿ ಕೆಎಸ್‌ಆರ್‌ಟಿಸಿ ಕೂಡ ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾದರೆ ನೌಕರರ ಉದ್ಯೋಗ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಪ್ರತಿದಿನ ಶಿಕ್ಷಣ, ಉದ್ಯೋಗ ಹಾಗೂ ಇತರ ಅಗತ್ಯ ಕಾರ್ಯಗಳಿಗಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆಯ ವೆಚ್ಚವನ್ನು ಸರ್ಕಾರವೇ ಸಾರಿಗೆ ಸಂಸ್ಥೆಗಳಿಗೆ ಭರಿಸುತ್ತಿರುವುದರಿಂದ ಶಕ್ತಿ ಯೋಜನೆಯಿಂದ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂಬ ಆರೋಪ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಹಾಲಿನ ದರ ಪರಿಷ್ಕರಣೆಯೂ ರೈತರ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರವಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳಿಗೆ ಜಾನುವಾರುಗಳ ಮೇವು, ಆಹಾರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹಾಲಿನ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಲೀಟರ್ ಹಾಲಿನ ಮೇಲೆ ರೈತರಿಗೆ ಹೆಚ್ಚುವರಿ ಹಣ ನೀಡುವ ಕ್ರಮ ಕೈಗೊಂಡಿದೆ. ರೈತರ ಆರ್ಥಿಕ ಸಬಲೀಕರಣ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.

ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಮಿತಾ ಅಶ್ವಿನ್ ಬಂಡಿಕೊಟ್ಯ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ದೇವಕಿ ಉಳ್ಳಾಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಕ್ಲೇರ ಕುವೆಲ್ಲೊ, ಕೋಟೆಕಾರು ಪ.ಪಂ ನಾಮ ನಿರ್ದೇಶಿತ ಸದಸ್ಯರಾದ ಸಫಿಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article