Bangalore: ತಿಂಗಳ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರು ಚುನಾವಣಾ ಆಯೋಗಕ್ಕೆ ಶಿಫಾರಸು
ಬೆಂಗಳೂರು: ಲೋಕಸಭಾ ಚುನಾವಣೆ ೨೦೨೪ರ ಸಂಬಂಧ ಕರ್ನಾಟಕ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಈ ಸಂಬಂಧ ಮಹತ್ವದ ಕುರಿತು ಹಾಗೂ ಅಭ್ಯರ್ಥಿಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಶುಕ್ರವಾರ ನಡೆಯಿತು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಇಂದು ನಡೆದ ಸಭೆಯಲ್ಲಿ ಹಲವು ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿದ್ದು, ಜನವರಿ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಇಂದು ನಡೆದ ಸಭೆಯಲ್ಲಿ ಹಲವು ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿದ್ದು, ಕೇಂದ್ರ ಚುನಾವಣಾ ಸಮಿತಿ ಅಧ್ಯಕ್ಷ ಚೌಧರಿ ಭಾಗಿಯಾಗಿದ್ದರು. ಎಲ್ಲಾ ಸದಸ್ಯರಿಗೆ ವೈಯಕ್ತಿಕ ಅಭಿಪ್ರಾಯ ತಿಳಿಸುವಂತೆ ಹೇಳಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಕೇಂದ್ರ ಚುನಾವಣಾ ಸಮಿತಿಗೆ ಹೆಸರುಗಳನ್ನು ಶಿಫಾರಸು ಮಾಡಬೇಕು. ಬಳಿಕ ಡಿಸಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಆಕಾಂಕ್ಷಿಗಳ ಜತೆ ವಿಸ್ತೃತ ಚರ್ಚೆ ನಂತರ ಅಭ್ಯರ್ಥಿ ಹೆಸರು ಅಂತಿಮಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸುರ್ಜೆವಾಲ, ಕೆಪಿಸಿಸಿಯಿಂದ ಸ್ಕ್ರೀನಿಂಗ್ ಕಮಿಟಿಗೆ ಶಿಫಾರಸು ಹೋಗುತ್ತದೆ. ಅಲ್ಲಿಂದ ಕೇಂದ್ರ ಚುನಾವಣಾ ಸಮಿತಿಗೆ ಹೋಗುತ್ತದೆ. ಬಳಿಕ ಕೇಂದ್ರ ಚುನಾವಣಾ ಸಮಿತಿ ಎಲ್ಲವನ್ನೂ ನಿರ್ಧಾರ ಮಾಡುತ್ತೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದು ಹೇಳಿದರು.