Ujire: ಗಮಕ ಸಾಹಿತ್ಯ, ಸಂಗೀತ ಸಂಯೋಜನೆಯ ಪರಿಪೂರ್ಣ ಕಲೆ: ಸೋನಿಯಾ ವರ್ಮ

Ujire: ಗಮಕ ಸಾಹಿತ್ಯ, ಸಂಗೀತ ಸಂಯೋಜನೆಯ ಪರಿಪೂರ್ಣ ಕಲೆ: ಸೋನಿಯಾ ವರ್ಮ


ಉಜಿರೆ: ಹಿಂದೂ ಪುರಾಣದ 64 ಕಲೆಗಳಲ್ಲಿ ಗಮಕ ಪ್ರಾಚೀನ ಕಲೆ. ಕಾವ್ಯಗಳಲ್ಲಿ ಅದ್ಭುತ ಶಕ್ತಿಯಿದ್ದು ಸಾವಿರಾರು ವರ್ಷಗಳಿಂದ  ಜೀವಂತವಾಗಿದ್ದು, ಶಾಶ್ವತವಾಗಿರುತ್ತದೆ. ಮಕ್ಕಳಿಗೆ ಕಲಿಕೆಗೆ ಅವಕಾಶವಿದ್ದು, ಮೊಬೈಲ್‌ನಲ್ಲಿ ಗಮಕದ ಚರಣಗಳನ್ನು ಅಳವಡಿಸಿಕೊಂಡರೆ ಕಲಿಯಲು ಸುಲಭ. ಗಮಕ  ಕಲೆಯ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯ ಮಕ್ಕಳಿಂದ ನಡೆಯಬೇಕಾಗಿದೆ. ಸಾಹಿತ್ಯ, ಸಂಗೀತ ಸಂಯೋಜನೆಯ ಪರಿಪೂರ್ಣವಾದ ಗಮಕ ಕಲೆಯನ್ನು ಹಿರಿಯರು  ಕಲಿತು ಮಕ್ಕಳಿಗೆ ಅಭಿರುಚಿ ಬೆಳೆಸಬೇಕಾಗಿದೆ ಎಂದು ಉಜಿರೆ ಎಸ್‌ಡಿಎಂ. ಶಿಕ್ಷಣ ಸಂಸ್ಥೆಯ ಸದಸ್ಯೆ ಸೋನಿಯಾ ವರ್ಮ ಹೇಳಿದರು.

ಅವರು ಜು.14 ರಂದು ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ದ.ಕ. ಜಿಲ್ಲೆ ಹಾಗೂ ಬೆಳ್ತಂಗಡಿ ತಾಲೂಕು ಘಟಕಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಸಹಯೋಗದಲ್ಲಿ ನಡೆದ ಮನೆ ಮನೆ ಗಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ 2 ತಿಂಗಳ ಕಾಲ ಪುರಾಣ ವಾಚನ ಪ್ರವಚನ ಕಾರ್ಯಕ್ರಮದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕಾರ್ಯ  ನಿರಂತರವಾಗಿ ನಡೆಯುತ್ತಿದೆ. ಟಿ.ವಿ., ಧಾರಾವಾಹಿಗಳಲ್ಲಿ ವಿಲನ್‌ಗಳನ್ನೇ ನಾಯಕರಾಗಿ ಬಿಂಬಿಸಿ ಸಮಾಜಕ್ಕೆ ತಪ್ಪು ಮಾಹಿತಿ ನೀಡುವ ಇಂದಿನ ದಿನಗಳಲ್ಲಿ ಬೋಧಪ್ರದ  ಪುರಾಣ ಕಾವ್ಯಗಳ ಮನೆ ಮನೆ ಗಮಕ ಕಾರ್ಯಕ್ರಮ ಔಚಿತ್ಯಪೂರ್ಣವಾದುದು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪರವಾಗಿ ಹಿರಿಯ ಗಮಕಿ ಕಲಾಶ್ರೀ ಗಂಗಮ್ಮ ಕೇಶವಮೂರ್ತಿ ಹಾಗೂ ಗಮಕಿ ವಿನಾಯಕ ಎಂ.ಎಸ್. ಅವರನ್ನು  ಸೋನಿಯಾ ವರ್ಮಾ ಗೌರವಿಸಿದರು.   

ಶ್ರೀವಿದ್ಯಾ ಐತಾಳ್ ಪ್ರಾರ್ಥಿಸಿ, ಎಸ್‌ಡಿಎಂ ವಸತಿ ಪ.ಪೂ. ಕಾಲೇಜು ಪ್ರಾಂಶುಪಾಲ ಸುನಿಲ್ ಪಂಡಿತ್ ಸ್ವಾಗತಿಸಿ, ಗಮಕ ಕಲಾ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಪ್ರಸ್ತಾವಿಸಿ, ಕಾರ್ಯದರ್ಶಿ ಮೇಧಾ ಅಶೋಕ್ ನಿರೂಪಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್  ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ರತ್ನಮಾನಸ ನಿಲಯ ಪಾಲಕ ಯತೀಶ್ ಉಪಸ್ಥಿತರಿದ್ದರು.

ಗಮಕ ಕಾರ್ಯಕ್ರಮ:

ತಾಲೂಕು ಮನೆ ಮನೆ ಗಮಕ ಕಾರ್ಯಕ್ರಮದ ೫ನೇ ಹೆಜ್ಜೆಯಾಗಿ ರನ್ನನ ಗಧಾಯುದ್ಧ ಮತ್ತು ಕುಮಾರವ್ಯಾಸ ಭಾರತದ ಉತ್ತರನ ಪೌರುಷ ಭಾಗವನ್ನು ಗಮಕಿ  ಕಲಾಶ್ರೀ ಗಂಗಮ್ಮ ಕೇಶವಮೂರ್ತಿ ವಾಚಿಸಿ, ಗಮಕಿ ವಿನಾಯಾಕ ಎಂ.ಎಸ್. ವ್ಯಾಖ್ಯಾನಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಹಾಗೂ ರತ್ನಮಾನಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article