ತುಳು ಸ್ನಾತಕೋತ್ತರ: ದುಬಾರಿ ಶುಲ್ಕ ಕಡಿತಕ್ಕೆ ಒತ್ತಾಯ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಡಿ ಕಾರ್ಯನಿರ್ವಹಿಸುತ್ತಿರುವ ತುಳು ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶಾತಿ ಶುಲ್ಕವನ್ನು 22,410ರೂಗೆ ಏರಿಸಿರುವುದನ್ನು ಖಂಡಿಸಿರುವ ‘ಪರಪು’ ತುಳು ಎಂಎ ಹಳೆ ವಿದ್ಯಾರ್ಥಿಗಳ ಸಂಘ ತಕ್ಷಣ ಶುಲ್ಕ ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲತೆ ಕಲ್ಪಿಸಬೇಕು ಎಂದು ವಿಶ್ವವಿದ್ಯಾನಿಲಯವನ್ನು ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಅವರು, ಪ್ರವೇಶಾತಿ ಶುಲ್ಕ ಹೆಚ್ಚಳವಾಗಿರುವುದರಿಂದ ವಿದ್ಯಾರ್ಥಿಗಳು ತುಳು ಎಂಎ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಮಂಗಳೂರು ವಿವಿಯಲ್ಲಿ ಆರ್ಥಿಕ ಕೊರತೆ ಎದುರಾಗಿರುವುದರಿಂದ ಪ್ರವೇಶಾತಿ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದಾಗಿ ವಿವಿ ಹೇಳುತ್ತದೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಹೊರೆಯಾಗಿ ಪರಿಣಮಿಸಿದೆ. ಆರಂಭದಲ್ಲಿ ತುಳು ಎಂ.ಎಗೆ ವಾರ್ಷಿಕ ಸುಮಾರು 15 ಸಾವಿರ ರೂ. ಶುಲ್ಕ ಇತ್ತು. ಆದರೆ ಸ್ಥಳೀಯ ಭಾಷೆಗೆ ನೆರವು ನೀಡುವ ನಿಟ್ಟಿನಲ್ಲಿ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು ಎಂದು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ವಿವಿಯು 2020-21ರಿಂದ 4 ಸಾವಿರ ರೂ. ಶುಲ್ಕ ಕಡಿತಗೊಳಿಸಿತ್ತು. ಇದೀಗ ೩ ವರ್ಷದ ನಂತರ ಶುಲ್ಕವನ್ನು ಮತ್ತೆ ಏರಿಸಿದ್ದು ಈ ಬಾರಿ 22410 ರೂ. ನಿಗದಿಪಡಿಸಲಾಗಿದೆ. ಇಷ್ಟೊಂದು ದುಬಾರಿ ಶುಲ್ಕ ತೆತ್ತು ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ ಎಂದವರು ಹೇಳಿದರು.
ಸಂಘದ ಖಜಾಂಚಿ ಪ್ರಶಾಂತಿ ಶೆಟ್ಟಿ ಇರುವೈಲು ಮಾತನಾಡಿ, ಎಂ.ಎ ತುಳು ವಿಭಾಗಕ್ಕೆ ಕನಿಷ್ಠ 15 ವಿದ್ಯಾರ್ಥಿಗಳು ಪ್ರವೇಶಾತಿ ಈ ವರ್ಷ ಕಡ್ಡಾಯಗೊಳಿಸಲಾಗಿದೆ. ಇಲ್ಲವಾದರೆ ವಿಭಾಗ ನಡೆಯುವುದಿಲ್ಲ. ಈ ಬಾರಿ ಪ್ರವೇಶಾತಿ ದಿನ ಮುಕ್ತಾಯವಾದರೂ 20ಕ್ಕೂ ಅಧಿಕ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಹಾಕುವವರಿದ್ದರು. ಆದರೆ, ಶುಲ್ಕ ದುಪ್ಪಟ್ಟು ಮಾಡಿದ ಕಾರಣದಿಂದ ಈಗ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಆಗಿಲ್ಲ ಎಂದರು.
ಉಪಾಧ್ಯಕ್ಷ ಹರೀಶ್ ಅಮೈ, ಹಳೆ ವಿದ್ಯಾರ್ಥಿ ಚಂದ್ರಹಾಸ ಕಣಂತೂರು ಉಪಸ್ಥಿತರಿದ್ದರು.