
ಪೊಲೀಸ್ ವಶದಲ್ಲಿದ್ದ ಆರೋಪಿ ಮೃತ್ಯು
ಉಡುಪಿ: ಮಹಿಳೆಗೆ ಚುಡಾಯಿಸಿದ ಆರೋಪ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆತಂದಿದ್ದ ಕೇರಳ ಮೂಲದ ಕಾರ್ಮಿಕನೋರ್ವ ಭಾನುವಾರ ನಸುಕಿನ ವೇಳೆ ಸೆಲ್‌ನ ಬಾತ್‌ರೂಮಿನೊಳಗೆ ಮೃತಪಟ್ಟಿದ್ದಾನೆ.
ಮೃತನನ್ನು ಕೇರಳದ ಕೊಲ್ಲಂ ಮೂಲದ ಬಿಜು ಮೋಹನ್ (42) ಎಂದು ಗುರುತಿಸಲಾಗಿದೆ. ಆತ ಹಂಗಾರಕಟ್ಟೆ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮೂರು ದಿನಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದು, ಸೂರಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆತ ನ.9ರಂದು ರಾತ್ರಿ ವೇಳೆ ಅಲ್ಲೇ ಸಮೀಪದ ಮನೆಯಲ್ಲಿ ವಾಸವಿದ್ದ ಮಹಿಳೆಯನ್ನು ಚುಡಾಯಿಸಿದ್ದ ಎಂದು ಆರೋಪಿಸಲಾಗಿದೆ.
ಆ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು, ಸ್ಥಳೀಯರು ಸೇರಿ ಬಿಜು ಮೋಹನ್‌ನನ್ನು ಹಿಡಿದು ಮನೆಯೊಳಗೆ ಕೂಡಿ ಹಾಕಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದರು.
ಮದ್ಯ ಸೇವಿಸಿದ್ದ ಎನ್ನಲಾದ ಬಿಜು ಮೋಹನ್‌ನನ್ನು ಸೆಲ್‌ನಲ್ಲಿರಿಸಲಾಗಿದ್ದು, ನಸುಕಿನ ವೇಳೆ 3.30ರ ಸುಮಾರಿಗೆ ಆತ ಸಮೀಪದ ಬಾತ್‌ರೂಮಿನಲ್ಲಿ ಕುಸಿದುಬಿದ್ದಿದ್ದು, ತಕ್ಷಣ ಆತನನ್ನು ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೇರಳ ಮೂಲದ ವ್ಯಕ್ತಿಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಮೃತರ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಕೇರಳದಿಂದ ಆಗಮಿಸುತ್ತಿರುವ ಮೃತರ ಕುಟುಂಬಸ್ಥರು ನೀಡುವ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.