ಚರ್ಚ್‌ಗಳಲ್ಲಿ ಪ್ರಾರ್ಥನೆ
ಮಂಗಳೂರು: ನೂತನ ಪೋಪ್ ಆಗಿ ಲಿಯೋ ಗಿಐಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕೃತಜ್ಞತೆ ಮತ್ತು ಭಾರತ-ಪಾಕಿಸ್ಥಾನ ನಡುವೆ ಶೀಘ್ರ ಶಾಂತಿ ನೆಲೆಸುವಂತೆ ಮಂಗಳೂರು ಧರ್ಮಕ್ಷೇತ್ರ ವ್ಯಾಪ್ತಿಯಲ್ಲಿ ರವಿವಾರ ವಿಶೇಷ ಪ್ರಾರ್ಥನೆ ಹಾಗೂ ಪರಮ ಪ್ರಸಾದದ ಆರಾಧನೆ ನಡೆಯಿತು.
ರವಿವಾರದ ಬಲಿಪೂಜೆಯ ವೇಳೆ ಎಂದಿನಂತೆ ರಾಷ್ಟ್ರ ಶಾಂತಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಪರಮ ಪ್ರಸಾದದ ಆರಾಧನೆ ನಡೆಯಿತು. ಭಾರತ ದೇಶದ ರಕ್ಷಣೆಗೆ ಯೋಧರಿಗೆ ವಿಶೇಷ ಶಕ್ತಿ, ಯುದ್ಧದ ಕಾರ್ಮೋಡ ನಿವಾರಣೆಗೊಂಡು ಶಾಂತಿ ಸ್ಥಾಪನೆಯಾಗಲಿ. ಉಗ್ರರ ಶಮನವಾಗಲಿ ಎಂದು ಕ್ರೈಸ್ತರು ಪವಿತ್ರ ಪರಮ ಪ್ರಸಾದದ ಮುಂದೆ ಮಂಡಿಯೂರಿ ಪ್ರಾರ್ಥಿಸಿದರು.
ಇದೇ ವೇಳೆ ಕೆಥೋಲಿಕರ ಪವಿತ್ರ ಸಭೆಗೆ ನೂತನ ಪರಮೋಚ್ಚಗುರು ಪೋಪ್ ರಾಬರ್ಟ್ ಫ್ರಾನ್ಸಿಸ್ ಪ್ರವೊಸ್ಟ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ದೇವರಿಗೆ ಕೃತಜ್ಞತೆ ಅರ್ಪಿಸಲಾಯಿತು. ಸಮುದಾಯವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಅವರಿಗೆ ಭಗವಂತ ಕರುಣಿಸುವಂತೆ ಪ್ರಾರ್ಥಿಸಲಾಯಿತು.
ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಬಂಟ್ವಾಳದ ಬಾಂಬಿಲ್ ಚರ್ಚ್‌ನಲ್ಲಿ ರವಿವಾರದ ಬಲಿಪೂಜೆ ನೆರವೇರಿಸಿ, ಪರಮಪ್ರಸಾದದ ಆರಾಧನೆ ನಡೆಸಿದರು. ನೂತನ ಪೋಪ್ ಲಿಯೋ ಗಿಐಗಿ ಅವರಿಗೆ ಪವಿತ್ರಸಭೆಯನ್ನು ಸಮರ್ಥವಾಗಿ ಮುನ್ನಡೆಸಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಧರ್ಮಕ್ಷೇತ್ರದ ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ, ವಿಟ್ಲ, ಬಂಟ್ವಾಳ, ಕಾಸರಗೋಡು, ಮುಡಿಪು ವಲಯಗಳ ಎಲ್ಲ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.