
ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಸ್‌ಪಿಎಲ್ ಸೀಸನ್-5 ಕ್ರಿಕೆಟ್ ಟೂರ್ನಿಗೆ ಚಾಲನೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿ (ಸ್ವಾಯತ್ತ)ನ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಆಯೋಜಿಸಿರುವ ‘ಸಂತ ಫಿಲೋಮಿನಾ ಪ್ರೀಮಿಯರ್ ಲೀಗ್ (ಎಸ್‌ಪಿಎಲ್) 2025 ‘ಸೀಸನ್ 5’ ಕ್ರಿಕೆಟ್ ಟೂರ್ನಿಗೆ ಮೇ 5ರಂದು ಕಾಲೇಜು ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ. ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ‘ಕ್ರೀಡೆಯ ಪ್ರೋತ್ಸಾಹದಿಂದ ಅಕಾಡೆಮಿಕ್ ಪ್ರಗತಿಯೂ ಸಾಧ್ಯ. ಫಿಲೋಮಿನಾ ಕ್ರೀಡಾಂಗಣ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ್ದು, ನಾಳೆಯ ಕನಸುಗಳು ಇಲ್ಲಿ ಸಾಕಾರವಾಗಲಿ ಎಂದು ಆಶಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಲ್ಯಾಸ್ ಪಿಂಟೋ ಅವರ ಪುತ್ರ ಕ್ರಿಸ್ ಏಂಜೆಲೋ ಅವರು ಮಂಗಳೂರು ವಲಯದ ಅಂಡರ್-16 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದನ್ನು ಅವರು ಶ್ಲಾಘಿಸಿದರು.
ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ನೋರ್ಬರ್ಟ್ ಮಸ್ಕರೇನ್ಹಸ್ ಮಾತನಾಡಿ, ‘ಈ ಕ್ರೀಡಾಂಗಣ ಪುಣ್ಯಭೂಮಿ. ಇಲ್ಲಿ ಬೆಳೆದ ಹಲವಾರು ಕ್ರೀಡಾಪಟುಗಳು ಸಮಾಜದಲ್ಲಿ ಗುರುತು ಗಳಿಸಿದ್ದಾರೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಎಲ್ಲರಲ್ಲಿರಲಿ’ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ‘ಪರಸ್ಪರ ವೈಮನಸ್ಸಿಲ್ಲದೇ ಕ್ರೀಡಾಸ್ಫೂರ್ತಿಯಿಂದ ಆಡಬೇಕು. ಸಚಿನ್ ತೆಂಡೂಲ್ಕರ್ ಅವರ ಶಿಸ್ತು ಮತ್ತು ಸಮರ್ಪಣೆಯಿಂದ ಕಲಿಯಬೇಕಿದೆ’ ಎಂದು ಸಲಹೆ ನೀಡಿದರು.
ಎಸ್‌ಪಿಎಲ್ 2025ರಲ್ಲಿ ಸ್ಪರ್ಧೆಗಿಳಿದ ಹತ್ತು ತಂಡಗಳು:
ಟೀಮ್ ಹೀಟ್ ವೇವ್ಸ್, ದಿ ಗೋಟ್ಸ್, ಟೀಮ್ ಅಗಸ್ತ್ಯ, ಅಗ್ನಿ ಬ್ರದರ್ಸ್, ಸ್ಕ್ವಾಡ್ರನ್ ಎಕ್ಸ್ ಡಿಕ್ರೋಜ್, ಫಿಲೋ ಹಾಕ್ಸ್, ಆಸ್ಟ್ರೋ ಮೋಂಕ್ಸ್, ಕಾಲ್ ಡ್ರಾಕ್ಸ್, ಟಿಎಂ ಟಿಎಕ್ಸ್‌ಎಂ ಮತ್ತು ಕಾಲೇಜು ಉಪನ್ಯಾಸಕರ ಬಳಗ.
ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗಿರುವ ಈ ಲೀಗ್‌ನಲ್ಲಿ ವಿದ್ಯಾರ್ಥಿಗಳು ಮಾಲಕರಾಗಿರುವ ತಂಡಗಳಿಗೆ ಐಕಾನ್ ಆಟಗಾರರೊಂದಿಗೆ ಬಿಡ್ಡಿಂಗ್ ಮೂಲಕ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರ ಮಾರ್ಗದರ್ಶನದಲ್ಲಿ ಮತ್ತು ಡಾ. ಎಲ್ಯಾಸ್ ಪಿಂಟೋ ಅವರ ನೇತೃತ್ವದಲ್ಲಿ ಜರಗಿತು.
ಕಬಡ್ಡಿ ತರಬೇತುದಾರ ಹಬೀಬ್ ಮಾಣಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಕ್ಸನ್ ಫೆರ್ನಾಂಡಿಸ್ ಮತ್ತು ಕ್ರೀಡಾ ಕಾರ್ಯದರ್ಶಿ ಅನ್ವೇಶ್ ರೈ ಉಪಸ್ಥಿತರಿದ್ದರು. ಡಾ. ಎಲ್ಯಾಸ್ ಪಿಂಟೋ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.