
ಮಾಸ್ಟರ‍್ಸ್ ಒಲಿಂಪಿಕ್ಸ್‌ನಲ್ಲಿ ಪದಕ
ಮಂಗಳೂರು: ಇತ್ತೀಚೆಗೆ ತೈವಾನ್ನ ಥೈಪೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಒಲಂಪಿಕ್ಸ್-2025 ಕ್ರೀಡಾಕೂಟದಲ್ಲಿ ಮಂಗಳೂರಿನ ಹಿರಿಯ ನ್ಯಾಯವಾದಿ ಡಿ.ಪದ್ಮನಾಭ ಕುಮಾರ್(ಪನ್ನಪ್ರಸಾದ್) 100, 200, 400, 4X100, 4X400 ವಿಭಾಗಗಳಲ್ಲಿ ಭಾಗವಹಿಸಿ ಎರಡು ಬೆಳ್ಳಿ ಪದಕ ಪಡೆದಿದ್ದಾರೆ.
ಈ ಕುರಿತು ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸ್ವತಃ ವಿವರ ನೀಡಿದ ಅವರು, ಇದು ನಾನು ಭಾಗವಹಿಸಿದ ಏಳನೇ ಅಂತಾರಾಷ್ಟ್ರೀಯ ಕ್ರೀಡಾಕೂಟವಾಗಿದೆ. ಈ ಹಿಂದೆ ಶ್ರೀಲಂಕಾದಲ್ಲಿ 2 ಬಾರಿ ಸಿಂಗಾಪುರದಲ್ಲಿ 2 ಬಾರಿ, ಏಷ್ಯನ್ ಮೀಟ್, 2007 ಡಬ್ಲ್ಯೂಎಂಜಿ ನ್ಯೂಜಿಲೆಂಡ್‌ನ ಆಕ್ಲೆಂಡ್ ಮತ್ತು 2028ರಲ್ಲಿ ಪೆನಾಗ್ ಮಲೇಷಿಯಾದಲ್ಲಿ ಭಾಗವಹಿಸಿ ಪದಕ ಗಳಿಸಿದ್ದೇನೆ ಎಂದರು.
ನನ್ನನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ 2 ಬಾರಿ. ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಮಲೇಷಿಯಾ ಮುಖ್ಯಮಂತ್ರಿಗಳಿಂದ ಆರು ಬಾರಿ ಸನ್ಮಾನಿತನಾಗಿದ್ದೇನೆ. ಈ ಕ್ರೀಡಾಕೂಟದಲ್ಲಿ 45 ಸಾವಿರ ಕ್ರೀಡಾಪಟುಗಳಿದ್ದು, 127 ರಾಷ್ಟ್ರಗಳು ಭಾಗವಹಿಸಿದ್ದವು. 48 ಸ್ಥಳಗಳಲ್ಲಿ ಸ್ಪರ್ಧೆ ನಡೆದಿತ್ತು. ಹಿಂದೆ 55 ಕೇಜಿ ಹಾಗೂ 65 ಕೇಜಿ ವಿಭಾಗದಲ್ಲಿ ನಾನು ಸ್ಪರ್ಧೆ ಎದುರಿಸಿದ್ದೇನೆ. ನನ್ನ ವಿಭಾಗದಲ್ಲಿ ಕನಿಷ್ಠ 25 ರಿಂದ 35 ಮಂದಿ ಕ್ರೀಡಾಪಟುಗಳು ಇದ್ದರು ಎಂದರು.
ಹಿರಿಯ ಕ್ರೀಡಾಪಟುಗಳಾದ ಎಸ್.ಆರ್.ಚಂದಾವರ್ಕರ್, ಆನಂದ ಸೋನ್, ಭಾಸ್ಕರ್ ರಾವ್ ಇದ್ದರು.