
ಲೋಕಾಯುಕ್ತ ಬಲೆಗೆ ಬಿದ್ದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಮೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಪೂಜಾರಿ ಅವರು ಕಚೇರಿಯಲ್ಲಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿದ್ದು, ಆತನನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಮೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಪೂಜಾರಿ ಅವರು ಸಾರ್ವಜನಿಕರೊಬ್ಬರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ಬಗ್ಗೆ ಸುಮಾರು 2 ತಿಂಗಳುಗಳಿಂದ ಸತಾಯಿಸುತ್ತಾ ಬಂದಿರುತ್ತಾರೆ. ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಪೂಜಾರಿ ಅವರು ದೂರದಾರರ ಬಳಿ 20,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ದೂರುದಾರರು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣಿಗೆ ದೂರು ನೀಡಿರುತ್ತಾರೆ.
ಜೂ.6 ರಂದು ಬೆಳಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಮೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಪೂಜಾರಿ ಅವರು ದೂರುದಾರರಿಂದ 20,000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಬ್ರಹ್ಮಾವರ ಮೆಸ್ಕಾಂ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಉಡುಪಿಯ ಪೊಲೀಸ್ ಅಧೀಕ್ಷಕ ಮಂಜುನಾಥ, ಪೊಲೀಸ್ ನಿರೀಕ್ಷಕರುಗಳಾದ ರಾಜೇಂದ್ರ ನಾಯ್ಕ ಎಂ., ಭಾರತಿ, ಜಿ, ಉಡುಪಿ ಮತ್ತು ಮಂಗಳೂರು ಲೋಕಾಯುಕ್ತ ಠಾಣೆಯ ಸಿಬ್ಬಂದಿಗಳ ಜೊತೆ ಭಾಗವಹಿಸಿದ್ದರು.