
ದನಗಳ್ಳರ ಬಂಧನ: ವಾಹನ ವಶ
ಕುಂದಾಪುರ: ಬಿದ್ಕಲ್ ಕಟ್ಟೆ ಪೇಟೆಯಲ್ಲಿ ರಸ್ತೆ ಬದಿಗೆ ಮಲಗಿದ್ದ ಜಾನುವಾರನ್ನು ಬೆಳಗಿನ ಜಾವ ಕಳವು ಮಾಡಿ ವೈದಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಕೋಟ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳದ ಪುದು ಗ್ರಾಮದ ಅಮ್ಮೆಮಾರ್ ಮಸೀದಿ ಬಳಿಯ ನಿವಾಸಿ ಇಮ್ರಾನ್ ಆಲಿಯಾಸ್ ಕುಟ್ಟು (31) ಹಾಗೂ ಮಂಗಳೂರು ತಾಲೂಕು ಮುಂದುಪುರ ಗ್ರಾಮದ ಗಂಜಿಮಠ ಆಜಾದ್ ನಗರದ ನಿವಾಸಿ ಇರ್ಷಾದ್ ಎಂಬುವವರು ಬಂಧಿತರು.
ಪ್ರಕರಣದ ವಿವರ:
ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಜಯಪ್ರಕಾಶ್ ಶೆಟ್ಟಿ ಎಂಬವರ ಮೊಬೈಲ್‌ಗೆ ಬಂದಿದ್ದ ಒಂದು ವಿಡಿಯೋ ಅನುಸರಿಸಿ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಈ ಜಾನುವಾರು ಕಳ್ಳರನ್ನು ದಸ್ತಗಿರಿ ಮಾಡಿದ್ದಾರೆ. ಜುಲೈ 19 ರಂದು ಬೆಳಗ್ಗಿನ ಜಾವ ಸುಮಾರು 3.50 ರ ವೇಳೆಯಲ್ಲಿ ಹುಣಸೆಮಕ್ಕಿ ಕಡೆಯಿಂದ ಬಂದ ವಾಹನದಿಂದ ಬಿದ್ಕಲ್ಕಟ್ಟೆ ಪೇಟೆಯಲ್ಲಿ ಇಳಿದ ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಮೂವರು, ರಸ್ತೆ ಬದಿಗೆ ಮಲಗಿದ್ದ ಹಸುವೊಂದನ್ನು ಹಗ್ಗ ಕಟ್ಟಿ ಹಿಂಸಾತ್ಮಕವಾಗಿ ಎಳೆದೊಯಿದು ವಾಹನಕ್ಕೆ ತುಂಬಿಸಿಕೊಂಡು ಶಿರಿಯಾರ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಕೋಟ ಪೊಲೀಸರು ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಅವರ ಮಾರ್ಗದರ್ಶನದಂತೆ ಕೋಟ ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ ಸಿ. ಹಾಗೂ ಸಿಬ್ಬಂದಿಗಳಾದ ಶ್ರೀಧರ್ ಮತ್ತು ರಾಘವೇಂದ್ರರನ್ನೊಳಗೊಂಡ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಓರ್ವನಾದ ಇಮ್ರಾನ್ ಆಲಿಯಾಸ್ ಕುಟ್ಟು ಎಂಬಾತನ ವಿರುದ್ಧ ಈ ಪ್ರಕಾರಣವೂ ಸೇರಿದಂತೆ ವಿವಿಧೆಡೆಯ ಠಾಣೆಗಳಲ್ಲಿ ಒಟ್ಟು 35 ಪ್ರಕರಣಗಳು ವಿವಿಧ ಕಡೆಗಳಲ್ಲಿ ದಾಖಲಾಗಿದೆ.
ಇನ್ನೋರ್ವ ಬಂಧಿತ ಇರ್ಷಾದ್ (30) ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ, ವಿಭಿನ್ನ ಅಕ್ರಮಗಳಿಗಾಗಿ ಒಟ್ಟು 14 ಪ್ರಕರಣಗಳಿವೆ. ಇವರ ಜೊತೆಗಿದ್ದಿದ್ದ ಇನ್ನೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.