
ಹೂ ಹಾಕುವ ಕಲ್ಲು ಇಂಗ್ಲಿಷ್ ಸಂವಹನ ಜೀವನ ಕೌಶಲ ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಸ್ಪೀಕರ್ ಸಂವಾದ
ಮಂಗಳೂರು: ಜು.24 ರಂದು ಬೆಳಗ್ಗೆ 9 ಗಂಟೆಗೆ ಪಿಎಮ್ ಶ್ರೀ ದ.ಕ.ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಹೂ ಹಾಕುವಕಲ್ಲುಗೆ ಸ್ಥಳೀಯ ಶಾಸಕ ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರು ಆಗಮಿಸಿ 5,6,7ನೇ ತರಗತಿಯ ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಸಂವಹನ ಜೀವನ ಕೌಶಲ ಕಲಿಕಾ ಸಾಮಗ್ರಿ ಕಿಟ್‌ಗಳನ್ನು ವಿತರಿಸಿ ಸಂವಾದ ನಡೆಸಿ ಪ್ರೇರಣೆ ನೀಡಲಿರುವರು.
ಜನ ಶಿಕ್ಷಣ ಟ್ರಸ್ಟ್, ದೇಶ್ ಪಾಂಡೆ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಉಳ್ಳಾಲ ತಾಲೂಕಿನ ಹೂ ಹಾಕುವಕಲ್ಲು, ಮುದುಂಗಾರು ಕಟ್ಟೆ, ಇರಾ ತಾಳಿತ್ತ ಬೆಟ್ಟು, ಪರಪು, ಮೊಂಟೆ ಪದವು, ಪಾಣೇಲ ಬೇರಿಕೆ, ಕುತ್ತಾರ್, ಕೊಣಾಜೆ ಪದವು, ಕಲ್ಕಟ್ಟ, ಬೆಳ್ಮ ದೇರಳಕಟ್ಟೆ ಶಾಲೆಗಳಲ್ಲಿ ೫,೬,೭ನೇ ತರಗತಿಯ ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಸಂವಹನ ಜೀವನ ಕೌಶಲ ವಿಶೇಷ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ.
ಈ ವಿಶೇಷ ಕಲಿಕಾ ಕಾರ್ಯಕ್ರಮದಲ್ಲಿ 364 ಹುಡುಗರು 294 ಹುಡುಗಿಯರು ಸೇರಿದಂತೆ ಒಟ್ಟು 658 ಮಕ್ಕಳು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ವಿಶೇಷ ತರಬೇತಿ ಹೊಂದಿದ ಕೇಂದ್ರ ಸಂಪನ್ಮೂಲ ವ್ಯಕ್ತಿಗಳು ಜೀವನ ಕೌಶಲದೊಂದಿಗೆ ಇಂಗ್ಲಿಷ್ ಸಂವಹನ ತರಭೇತಿ ನೀಡುತ್ತಿದ್ದಾರೆ ಎಂದು ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.