ಡಿವೈಡರ್‌ಗೆ ಢಿಕ್ಕಿ ಹೊಡೆದ ಟ್ಯಾಂಕರ್: ಚಾಲಕ, ನಿರ್ವಾಹಕ ಪಾರು
Tuesday, September 16, 2025
ಬಂಟ್ವಾಳ: ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಬಳಿ ಟ್ಯಾಂಕರೊಂದು ಹೆದ್ದಾರಿ ಡಿವೈಡರಿಗೆ ಢಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಪೆಟ್ರೋಲಿಯಂ ಸಾಗಾಟದ ಟ್ಯಾಂಕರ್ ಪಾಣೆಮಂಗಳೂರು ಹೊಸ ಸೇತುವೆ ಬಳಿ ರಸ್ತೆ ತಿರುವು ಪಡೆದಿರುವುದು ಚಾಲಕನ ಗಮನಕ್ಕೆ ಬಾರದೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸೇತುವೆ ಬಳಿ ಮತ್ತೊಂದು ಸೇತುವೆಯ ನಿರ್ಮಾಣ ಕಾಮಗಾರಿ ನಡೆಯತ್ತಿರುವ ಹಿನ್ನಲೆಯಲ್ಲಿ ಸೇತುವೆ ಹತ್ತಿರದಲ್ಲೇ ಹೆದ್ದಾರಿಗೆ ಡೈವರ್ಸನ್ ಕೊಡಲಾಗಿದೆ. ಆದರೆ ಈ ರಸ್ತೆ ಕವಲೊಡೆಯುವ ಸ್ಥಳದಲ್ಲಿ ಸಮರ್ಪಕ ಸೂಚನಾ ಫಲಕ ಅಳವಡಿಸದಿರುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನ ಚಾಲಕರು ಯಾಮಾರುವುದು ಸಹಜವಾಗಿದೆ.
ಅಲ್ಲದೆ ಹೆದ್ದಾರಿಯಲ್ಲಾಗಲೀ ಸೇತುವೆಯಲ್ಲಾಗಲೀ ದಾರಿ ದೀಪಗಳೂ ಕೂಡಾ ಇಲ್ಲದಿರುವುದರಿಂದ ರಾತ್ರಿ ವೇಳೆ ಈ ಪ್ರದೇಶದಲ್ಲಿ ಕತ್ತಲಾವರಿಸುತ್ತಿದ್ದು, ಆಕ್ಸಿಡೆಂಡ್ ಸ್ಪಾಟ್ ಆಗುತ್ತಿದೆಯೆಂದು ಸ್ಥಳೀಯರು ದೂರಿದ್ದಾರೆ.
ಘಟನೆಯಿಂದ ಟ್ಯಾಂಕರ್ ಚಾಲಕ, ನಿರ್ವಾಹಕರಿಬ್ಬರೂ ಕೂಡಾ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಹೆದ್ದಾರಿ ಡಿವೈಡರ್ ಕಲ್ಲುಗಳು ತುಂಡಾಗಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಅಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು.

