ನಾಡ ಹಬ್ಬ ದಸರಾಕ್ಕೆ ಮತಧರ್ಮದ ಬಂಧನ ಇಲ್ಲ: ಬಿಪಿನಚಂದ್ರ ಪಾಲ್ ನಕ್ರೆ
ಕಾರ್ಕಳ: ಬಹು ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಖ್ ಅವರು ನಾಡಹಬ್ಬ ದಸರಾವನ್ನು ಉದ್ಘಾಟಿಸುತ್ತಿರುವುದನ್ನು ವಿರೋಧಿಸುತ್ತಿರುವ ಬಿಜೆಪಿ ಸಂಘ ಪರಿವಾರದ ನಡೆ ಹಿಂದೂ ಧರ್ಮ ಪ್ರತಿಪಾದಿಸಿಕೊಂಡು ಬಂದ ‘ವಸುದೈವ ಕುಟುಂಬ’ ಚಿಂತನೆಯ ಮಹಾ ಉಲ್ಲಂಘನೆ ಆಗಿದೆ. ನಾಡ ಹಬ್ಬ ದಸರಾಕ್ಕೆ ಮತಧರ್ಮದ ಬಂಧನ ಇಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೈದರಾಲಿ, ಟಿಪ್ಪ ಸುಲ್ತಾನ್‌ನಂತವರ ಕಾಲದಿಂದ ನಡೆದು ಬಂದ, ಮಿರ್ಜಾ ಇಸ್ಮಾಯಿಲ್‌ನಂತವರು ಅಂಬಾರಿ ಏರಿದ, ಕವಿ ನಿಸ್ಸಾರ್ ಅಹಮ್ಮದ್‌ನಂತವರು ಉದ್ಘಾಟಿಸಿದ ಅಭೂತಪೂರ್ವ ಪರಂಪರೆಯ ಇತಿಹಾಸವನ್ನು ಹೊಂದಿರುವ ನಾಡಹಬ್ಬ ದಸರಾ ಉದ್ಘಾಟನೆಯನ್ನು ಹಿಂದೂ ಧಾರ್ಮಿಕ ಭಾವನೆಯ ನೆಪವೊಡ್ಡಿ ಕೋಟ್೯ ಕಟಕಟೆಯವರೆಗೆ ಎಳೆದು ತಂದ ಮಾಜಿ ಸಂಸದ ಪ್ರತಾಪ ಸಿಂಹ ಆದಿಯಾಗಿ ಕೆಲವೊಂದು ಬಿಜೆಪಿಯ ಅವಕಾಶ ವಂಚಿತ ಅಸಂತೃಪ್ತ ನಾಯಕರ ಕ್ರಮ ಖಂಡನೀಯ. ಇದರಲ್ಲಿ ರಾಜಕೀಯದ ಸ್ವಾರ್ಥಸಾಧನೆ ಅಡಗಿದೆ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷವೊಂದಕ್ಕೆ ಇದು ಭೂಷಣವೂ ಅಲ್ಲ ಎಂದು ಅವರು ಹೇಳಿದ್ದಾರೆ.
ಅಷ್ಟಕ್ಕೂ ಉದ್ಘಾಟಕರು ನಾಡಹಬ್ಬ ದಸರಾ ಕಾರ್ಯಕ್ರಮದ ಭೌತಿಕ ಉದ್ಘಾಟನೆಯನ್ನು ಮಾಡುತ್ತಾರೆಯೇ ಹೊರತು ಆ ಹೊತ್ತು ಸನ್ನಿದಿಯಲ್ಲಿ ನಡೆಯಬಹುದಾದ ಎಲ್ಲಾ ಧಾರ್ಮಿಕ ಆಗಮೋಕ್ತ ವೈಧಿಕ ವಿಧಿ ವಿಧಾನಗಳನ್ನು ಅಲ್ಲಿನ ನಿಯೋಜಿತ ಪುರೋಹಿತ ವರ್ಗವೇ ನಡೆಸಿಕೊಡುತ್ತದೆ. ಆದಾಗಿಯೂ ಧರ್ಮದ ಹೆಸರಲ್ಲಿ, ಹೆಣ್ಣಿನ ಹೆಸರಲ್ಲಿ, ಕುಂಕುಮ ಧಾರಣೆಯ ಹೆಸರಲ್ಲಿ, ಕನ್ನಡ ನುಡಿಯ ಗೌರವದ ಹೆಸರಲ್ಲಿ ಇದನ್ನು ವಿರೋಧಿಸುವ ಮಂದಿ ನಾಡ ದ್ರೋಹಿಗಳೆಂದರೆ ಅತಿಶಯೋಕ್ತಿಯಾಗದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.