ರಾಮಕೃಷ್ಣ ಮಠ ಸಮಾಜಕ್ಕೆ ಹೊಸ ಆಯಾಮವನ್ನು ನೀಡಿದೆ: ಸ್ವಾಮಿ ಸುಹಿತಾನಂದಜಿ ಮಹಾರಾಜ್
ಮಂಗಳೂರಿನ ರಾಮಕೃಷ್ಣ ಮಿಷನ್ ಅಮೃತ ಮಹೋತ್ಸವದ ಪ್ರಯುಕ್ತ ಮಂಗಳೂರಿನ ರಾಮಕೃಷ್ಣ ಮಿಷನ್‌ನಲ್ಲಿ ನಡೆದ ಪ್ರಜ್ಞಾ-ವೃತ್ತಿಪರ ವಿದ್ಯಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು, ಪೋಷಕರು, ಸಮಾಜದ ಗಣ್ಯ ವ್ಯಕ್ತಿಗಳನ್ನೊಳಗೊಂಡಂತೆ ಸಮಾಜದ ಸಜ್ಜನ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಕಾರ್ಯಗಳನ್ನು ಮಾಡಿದೆ. ಈ ಕಾರ್ಯಗಳು ಇದೇ ರೀತಿ ಮುಂದುವರಿಯಲಿ. ಕೇವಲ ಉತ್ತಮ ಕೆಲಸ ಹಾಗೂ ಸಂಬಳ ಪಡೆಯುದರ ಜೊತೆಗೆ ಉನ್ನತವಾದ ಆದರ್ಶಗಳನ್ನು ಹೊಂದಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ ಉತ್ತಮ ನಾಗರೀಕರಾಗೋಣ ಎಂದರು.
ಮುಖ್ಯ ಅತಿಥಿ ಮಂಗಳೂರಿನ ಎಂಆರ್‌ಪಿಎಲ್-ಒಎನ್‌ಜಿಸಿಯ ಕಾರ್ಯನಿರ್ವಾಹಕ ನಿರ್ದೇಶಕ (ಪ್ರಾಜೆಕ್ಟ್ಸ್) ಬಿ.ಹೆಚ್.ವಿ. ಪ್ರಸಾದ್ ಮಾತನಾಡಿ, ಧನಾತ್ಮಕ ಮನೋಭಾವ ಮತ್ತು ಧನಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಇದು ನಮ್ಮ ಜೀವನವನ್ನು ನಿರ್ಧರಿಸುತ್ತದೆ. ಇದನ್ನು ನೀವು ಅಭ್ಯಸಿಸಿದಲ್ಲಿ ಇದು ನಿಮ್ಮ ಜೀವನಕ್ರಮವಾಗುತ್ತದೆ. ಯಶಸ್ವೀ ವ್ಯಕ್ತಿಗಳ ಜೀವನವನ್ನು ನಾವು ನೋಡಿದಾಗ ಅವರ ಯಶಸ್ಸಿನ ರಹಸ್ಯ ಇದೇ ಆಗಿರುತ್ತದೆ. ನಮ್ಮ ಸಂಸ್ಥೆ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ ಸಂಬಂಧ ಒಂದು ದಶಕಕ್ಕೂ ಹಳೆಯದು. ಸ್ವಚ್ಛ ಮಂಗಳೂರು ಅಭಿಯಾನ ನಮ್ಮ ಸಂಸ್ಥೆಯ ಸಹಯೋಗದೊಂದಿಗೆ ಅತ್ಯಂತ ಯಶಸ್ವಿಯಾಗಿ
ನಡೆದಿದೆ ಇದರ ಕೀರ್ತಿ ರಾಮಕೃಷ್ಣ ಮಿಷನ್‌ಗೆ ಸಲ್ಲಬೇಕು. ಈ ಕಾರ್ಯವನ್ನು ನಿರಂತರವಾಗಿ ಮಾಡಿ ಕೇವಲ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯಲ್ಲದೆ ಸ್ವಚ್ಛ ಮನಸ್, ಸ್ವಚ್ಛ ಸೋಚ್, ಜಾಗೃತಿ ಅಭಿಯಾನದಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ರಾಮಕೃಷ್ಣ ಮಿಷನ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಈ ಸಮಾರಂಭದಲ್ಲಿ ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಹಾಗೂ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್, ಬೇಲೂರು ಮಠ ಇದರ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಹಾಗೂ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.