ಕ್ಯಾಂಪ್ಕೋದಿಂದ ಸಾವಯವ ಗೊಬ್ಬರ ಉತ್ಪಾದನೆ: ಅಡಕೆ ಕೃಷಿಕರಿಗೆ ಅನುಕೂಲ

ಕ್ಯಾಂಪ್ಕೋದಿಂದ ಸಾವಯವ ಗೊಬ್ಬರ ಉತ್ಪಾದನೆ: ಅಡಕೆ ಕೃಷಿಕರಿಗೆ ಅನುಕೂಲ


ಮಂಗಳೂರು: ಅಡಕೆ ಕ್ಷೇತ್ರದ ಕೃಷಿಕರಿಗೆ ಅನುಕೂಲವಾಗಲು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸಾವಯವ ಗೊಬ್ಬರ ಉತ್ಪಾದನೆಗೆ ಮುಂದಾಗಿದೆ. ಮಂಗಳೂರು ಹೊರ ವಲಯದ ಅಡ್ಯಾರು ಗಾರ್ಡನ್‌ನಲ್ಲಿ ಶನಿವಾರ ನಡೆದ 51ನೇ ವಾರ್ಷಿಕ ಮಹಾಸಭೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಈ ವಿಚಾರ ತಿಳಿಸಿದರು.

ಕೃಷಿಕರಿಗೆ ಬೇಕಾದ ಪೋಷಕಾಂಶ ಗೊಬ್ಬರಗಳ ಕಚ್ಚಾವಸ್ತುಗಳನ್ನು ಪ್ರಸಕ್ತ ಕ್ಯಾಂಪ್ಕೋ ಹೊರಗಿನಿಂದ ಖರೀದಿಸಿ ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ನೀಡುತ್ತಿದೆ. ಇನ್ನು ಮುಂದೆ ಸ್ವತಃ ಕ್ಯಾಂಪ್ಕೋ ಸಂಸ್ಥೆ ಸಾವಯವ ಗೊಬ್ಬರ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಚಿತ್ರದುರ್ಗದ ಹಿರಿಯೂರಿನಲ್ಲಿ 18 ಎಕರೆ ಜಾಗ ಖರೀದಿಗೆ ನಿರ್ಧರಿಸಿದೆ. ಪ್ರಧಾನ ಮಂತ್ರಿಗಳ ಸಾವಯವ ಉತ್ಪನ್ನಗಳಿಗೆ ಒತ್ತು ನೀಡುವ ಉದ್ದೇಶವನ್ನು ಸಾಕಾರಗೊಳಿಸಲು ಕ್ಯಾಂಪ್ಕೋ ಬದ್ಧವಾಗಿದೆ ಎಂದರು.

ಅಡಮಾನ ಯೋಜನೆ..

ಸದಸ್ಯ ಗ್ರಾಹಕರು ಅಡಕೆಯನ್ನು 2 ಕ್ವಿಂಟಾಲ್ ವರೆಗೆ ಅಡಮಾನವಾಗಿ ಕ್ಯಾಂಪ್ಕೋದಲ್ಲಿ ಇರಿಸಲು ಅವಕಾಶ ಇದೆ. ಹಿಂದೆ ಇದು 10 ಕ್ವಿಂಟಾಲ್ ಮಿತಿಯನ್ನು ಹೊಂದಿತ್ತು. ಸಾಮಾನ್ಯ ಅಡಕೆ ಬೆಳೆಗಾರರಿಗೆ ಅನುಕೂಲವಾಗಲು ಅದನ್ನು ಈಗ 200 ಕಿಲೋಗೆ ಮಿತಿ ನಿಗದಿಪಡಿಸಲಾಗಿದೆ. ಅಂತಹ ಗ್ರಾಹಕರಿಗೆ ಗರಿಷ್ಠ ಶೇ.60 ರಷ್ಟು ಮೊತ್ತವನ್ನು ಮಂಗಡ ಸಾಲದ ರೂಪದಲ್ಲಿ ನೀಡಲಾಗುವುದು. ಆದರೆ ಶೇ.30ರಷ್ಟು ಮುಂಗಡ ಸಾಲ ಕಡ್ಡಾಯ ಪಡೆಯಬೇಕು. ದರ ಹೆಚ್ಚಳವಾದಾಗ ಅಥವಾ ತಮಗೆ ಬೇಕೆನಿಸಿದಾಗ ಆ ಅಡಕೆಯನ್ನು ಮಾರಾಟ ಮಾಡಲು ಅವಕಾಶ ಇದೆ. ನೈಟ್ರೋಜನ್ ಸ್ಟೋರೇಜ್ ವ್ಯವಸ್ಥೆ ಮೂಲಕ ಅಡಕೆ ದಾಸ್ತಾನು ಹಾಗೂ ಅಡಮಾನ ಸೌಲಭ್ಯವನ್ನು ಎಲ್ಲ ಶಾಖೆಗಳಿಗೆ ವಿಸ್ತರಿಸಲು ಚಿಂತಿಸಲಾಗಿದೆ ಎಂದರು.

ಅಧ್ಯಯನ..

ಪ್ರಸಕ್ತ ಅಡಕೆಗೆ ಇರುವ ಶೇ.7.1ರ ತೇವಾಂಶ ಪ್ರಮಾಣವನ್ನು ಶೇ.11ರ ವರೆಗೆ ನಿಗದಿಪಡಿಸುವುದಕ್ಕೆ ಸಂಬಂಧಿಸಿ ಅಡಕೆ ಮಹಾಮಂಡಲ 14.84 ಲಕ್ಷ ರೂ. ಮೊತ್ತವನ್ನು ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ(ಸಿಪಿಸಿಆರ್‌ಐ) ಬಿಡುಗಡೆ ಮಾಡಿದೆ. ದೇಶ, ವಿದೇಶಗಳಿಂದ ನಾನಾ ವಿಧದ ತಲಾ 5 ಕಿಲೋ ಅಡಕೆಯ ಸ್ಯಾಂಪಲ್‌ನ್ನು ತರಿಸಿಕೊಂಡು ಸಿಪಿಸಿಆರ್‌ಐಗೆ ನೀಡಿದೆ. ಅದು ಶೀಘ್ರವೇ ಅಧ್ಯಯನ ನಡೆಸಿ ಅಡಕೆಯಲ್ಲಿನ ಈಗಿನ ತೇವಾಂಶ ಪ್ರಮಾಣದ ಬಗ್ಗೆ ಸಂಶೋಧನಾ ವರದಿಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಸಲ್ಲಿಸಲಿದೆ ಎಂದರು.

ಕೃಷಿಕರಿಗೆ ನೆರವಾಗಲು ಕ್ಯಾಂಪ್ಕೋ ವತಿಯಿಂದ ಪುತ್ತೂರಿನಲ್ಲಿ ಅತ್ಯಾಧುನಿಕ ಮಾದರಿಯ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇದನ್ನು ಕ್ಯಾಂಪ್ಕೋದ ಎಲ್ಲ ಶಾಖೆಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ಅಡಕೆ ಮೇಲೆ ಕೇಂದ್ರ ಸರ್ಕಾರ ಶೇ.18ರ ಜಿಎಸ್‌ಟಿ ತೆರಿಗೆ ವಿಧಿಸುತ್ತಿದೆ. ಇದನ್ನು ಶೇ. 5ಕ್ಕೆ ಇಳಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವರನ್ನು ಕ್ಯಾಂಪ್ಕೋ ನಿಯೋಗ ಜನಪ್ರತಿನಿಧಿಗಳ ಜೊತೆ ತೆರಳಿ ಮನವರಿಕೆ ಮಾಡಿದೆ. ಆದರೆ ಇತ್ತೀಚೆಗೆ ನಡೆದ ಜಿಎಸ್‌ಟಿ ಸಭೆಯಲ್ಲಿ ಈ ತೆರಿಗೆ ಇಳಿಕೆ ಮಾಡಿಲ್ಲ. ಹಾಗಾಗಿ ಮತ್ತೊಮ್ಮೆ ವಿತ್ತ ಸಚಿವರ ಮೇಲೆ ಒತ್ತಡ ತರುವ ಅನಿವಾರ್ಯತೆ ಇದೆ. ದುಬಾರಿ ಜಿಎಸ್‌ಟಿ ತೆರಿಗೆಯಿಂದಾಗಿ ಅಡಕೆ ಬೆಳೆಗಾರರಿಗೆ ದರದಲ್ಲಿ ಹೊಡೆತ ಉಂಟಾಗುತ್ತಿದೆ ಎಂದ ಅವರು, ಕ್ಯಾಂಪ್ಕೋ ತನ್ನದೇ ಆದ ಆಪ್‌ನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ಮಾರ್ಚ್ ವೇಳೆಗೆ ಸದಸ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಅದರಲ್ಲಿ ಕ್ಯಾಂಪ್ಕೋ ಉತ್ಪನ್ನಗಳ ದೈನಂದಿನ ಧಾರಣೆ, ಷೇರು ಮಾರುಕಟ್ಟೆ ವಿವರಗಳು ಅಪ್‌ಡೇಟ್ ಆಗಲಿವೆ ಎಂದರು.

51.85 ಕೋಟಿ ಲಾಭ..

2024-25ನೇ ಸಾಲಿನಲ್ಲಿ ಕ್ಯಾಂಪ್ಕೋ ಸಂಸ್ಥೆ 51.85 ಕೋಟಿ ರೂ. ಲಾಭ ದಾಖಲಿಸಿದ್ದು, 3,632 ಕೋಟಿ ರೂ.ಗಳ ವ್ಯವಹಾರ ದಾಖಲಿಸಿದೆ. ಸದಸ್ಯ ಗ್ರಾಹಕರಿಗೆ ಶೇ.8 ಲಾಭಾಂಶ ಪ್ರಕಟಿಸಿದೆ. ಸದಸ್ಯ ಗ್ರಾಹಕರಿಗೆ ಅಡಕೆ ಕೇಜಿಗೆ 2 ರೂ., ಕೊಕ್ಕೋ ಹಸಿ ಬೀಜ ಕೇಜಿಗೆ 4 ರೂ. ಮತ್ತು ಒಣ ಕೋಕ್ಕೋ ಕೇಜಿಗೆ 6 ರೂ.ನಂತೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಕ್ಯಾಂಪ್ಕೋ ಸಿಬ್ಬಂದಿಗೆ ಶೇ.14ರ ಉದಾರ ಭತ್ಯೆ ನೀಡಲು ಸಮ್ಮತಿಸಲಾಗಿದೆ. ಈ ಸಂಸ್ಥೆಯು 2,825.77 ಕೋಟಿ ರೂ. ಮೌಲ್ಯದ 65,675.39 ಮೆಟ್ರಿಕ್ ಟನ್ ಅಡಕೆ ಮಾರಾಟ ಮಾಡಿದೆ.

ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್ ಪಿ.,ಜಯಪ್ರಕಾಶ್ ನಾರಾಯಣ, ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ., ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಪ್ರಧಾನ ವ್ಯವಸ್ಥಾಪಕಿ ರೇಷ್ಮಾ ಮಲ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article