ಸಮಾಜಮುಖಿ ಶಿಕ್ಷಕರನ್ನು ಗುರುತಿಸುವ ಚಾಣಕ್ಯ ಸಂಸ್ಥೆಯ ಕಾಳಜಿ ಶ್ಲಾಘನೀಯ: ಪ್ರಸಾದ್ ಎಸ್.ಎ.

ಸಮಾಜಮುಖಿ ಶಿಕ್ಷಕರನ್ನು ಗುರುತಿಸುವ ಚಾಣಕ್ಯ ಸಂಸ್ಥೆಯ ಕಾಳಜಿ ಶ್ಲಾಘನೀಯ: ಪ್ರಸಾದ್ ಎಸ್.ಎ.


ಕಾರ್ಕಳ: ಕಳೆದ ಹಲವಾರು ವರ್ಷಗಳಿಂದ ಯಾವುದೇ ಅರ್ಜಿ ಸಲ್ಲಿಸದೆ ತನ್ನಷ್ಟಕ್ಕೆ ಶಿಕ್ಷಣ ಜೊತೆ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಗುರುತಿಸಿಕೊಂಡ ಶಿಕ್ಷಕರನ್ನ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಚಾಣಕ್ಯ ಸಂಸ್ಥೆಯ ಸಮಾಜಮುಖಿ ಚಿಂತನೆ ಶ್ಲಾಘನೀಯ. ಈ ಬಾರಿಯ ಪ್ರಶಸ್ತಿಯನ್ನು ಉತ್ತಮ ಸಮಾಜಮುಖಿ ಶಿಕ್ಷಕ ರವೀಂದ್ರ ಹೆಗ್ಡೆ ಅವರಿಗೆ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದು ಹೆಬ್ರಿ ತಾಲೂಕು ತಹಶೀಲ್ದಾರ್ ಪ್ರಸಾದ್ ಎಸ್.ಎ. ಹೇಳಿದರು.

ಅವರು ಹೆಬ್ರಿ ಬಂಟರ ಭವನದಲ್ಲಿ ನಾಡಿನ ಹಿರಿಯ ಸಾಹಿತಿ ಕೀರ್ತಿ ಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಹೆಬ್ರಿ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆಯವರಿಗೆ ಪ್ರದಾನ ಮಾಡಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಬಿ. ಹರ್ಷ ಶೆಟ್ಟಿ ಮಾತನಾಡಿ, ಚಾಣಕ್ಯ ಸಂಸ್ಥೆ ವಿವಿಧ ಕಲಾಪ್ರಕಾರದ ನೂರಾರು ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಕೆಲಸ ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬರುತ್ತಿದೆ. ಈ ನಡುವೆ ಸಾಧಕ ಶಿಕ್ಷಕರನ್ನು ಗುರುತಿಸಿಸುವ ಕೆಲಸ ಮಾದರಿ ಎಂದರು.

ಶಾಲೆಗೆ ಸಂದ ಗೌರವ 

ಪ್ರಶಸ್ತಿ ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಟ್ಟೆ ಇಲ್ಲಿನ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಮಾತನಾಡಿ ಈ ಪ್ರಶಸ್ತಿಯು ನನ್ನ ಶಾಲೆಗೆ ಸಂದ ಗೌರವವಾಗಿದೆ. ಶಾಲಾ ಎಸ್.ಡಿ.ಎಂ.ಸಿ, ಶಾಲಾ ಶಿಕ್ಷಕರು, ಪೋಷಕರು, ಹಳೇವಿದ್ಯಾರ್ಥಿಗಳು, ಶಿಕ್ಷಣ ಇಲಾಖೆ ಎಲ್ಲರ ಸಹಭಾಗಿತ್ವದಲ್ಲಿ ಶಾಲಾ ಅಭಿವೃದ್ಧಿ ಕಾರ್ಯಕ್ಕೆ  ನೀಡಿದ ಸಹಕಾರದಿಂದ ಶಾಲೆಯನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಾಯಿತು. ನನ್ನನ್ನು ಗುರುತಿಸಿ ಸನ್ಮಾನಿಸಿದ ಚಾಣಕ್ಯ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ನಿಟ್ಟೆ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀ ಮುದ್ರಾಡಿ ಮಾತನಾಡಿ, ತನ್ನ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಸೇವೆಯನ್ನು ನೀಡುತ್ತಾ ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡಿದ್ದು ರವೀಂದ್ರ ಹೆಗ್ಡೆ ಅವರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿ ಸಿಗುವಂತಾಗಲಿ ಎಂದರು.

ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಾದ ವೈಷ್ಣವಿ, ಪ್ರಧನ್ವಿ, ಅಂಕಿತ್ ರಾಜ್ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಹೆಬ್ರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. 

ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಮುದ್ರಾಡಿ ಗ್ರಾ.ಪಂ. ಸದಸ್ಯ ಸನತ್ ಕುಮಾರ್, ಮುದ್ರಾಡಿ ನೇತಾಜಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಸಂತೋಷ ಪೂಜಾರಿ ಬಲ್ಲಾಡಿ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಅಧ್ಯಕ್ಷೆ ಆಶಾ ಬಿ. ಶೆಟ್ಟಿ, ಜೆಸಿಐ ಅಧ್ಯಕ್ಷೆ ಸೋನಿ. ಪಿ. ಶೆಟ್ಟಿ, ನಿತ್ಯಾನಂದ ಭಟ್, ಇಂದಿರಾ ರವೀಂದ್ರ ಹೆಗ್ಡೆ, ಶೀಲಾ ಪ್ರವೀಣ್, ಆಶಾ ರಾಜೇಶ್ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. 

ಶಿಕ್ಷಕ ಪ್ರವೀಣ್ ಶೆಟ್ಟಿ ಪ್ರಶಸ್ತಿ ಪುರಸ್ಕತರ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಚಾಣಕ್ಯ ಮೆಲೋಡಿಸ್ ತಂಡದಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.

ಹೆಬ್ರಿ ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತಾನಾಡಿದರು. ಮುದ್ರಾಡಿ ಶಾಲಾ ಮುಖ್ಯ ಶಿಕ್ಷಕ ಬಲ್ಲಾಡಿ  ಚಂದ್ರಶೇಖರ ಭಟ್ ನಿರೂಪಿಸಿ, ನಿತ್ಯಾನಂದ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article