ಧರ್ಮಸ್ಥಳ ಪ್ರಕರಣ: ನ್ಯಾಯಾಲಯದಲ್ಲಿ ಪ್ರದೀಪ್ ಹೇಳಿಕೆ ದಾಖಲು
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ತನಿಖೆ ಮುಂದುವರೆದಿದೆ.
ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಶುಕ್ರವಾರ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟೆಣ್ಣವರ್, ಪ್ರದೀಪ್ ಮತ್ತು ಜಯಂತ್ ಬೆಳಗ್ಗೆ ಎಸ್‌ಐಟಿ ಕಚೇರಿಗೆ ಆಗಮಿಸಿ ಸಂಜೆ ವರೆಗೆ ವಿಚಾರಣೆ ಎದುರಿಸಿದರು. ಪ್ರದೀಪ್ ಅವರನ್ನು ಎಸ್‌ಐಟಿ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ತಲೆಬುರುಡೆ ಪತ್ತೆ ಪ್ರಕರಣದಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಲು ಹೇಳಿಕೆ ಪಡೆದು ದಾಖಲಿಸಲಾಗಿದೆ. ಇವರಲ್ಲಿ ಪ್ರದೀಪ್‌ಗೆ ಐದನೇ ದಿನ, ಗಿರೀಶ್ ಮಟ್ಟೆಣ್ಣವರ್ ಎಂಟನೇ ದಿನ ಹಾಗೂ ಜಯಂತ್ಗೆ ಒಂಭತ್ತನೇ ದಿನದ ವಿಚಾರಣೆಯಾಗಿದೆ.
ಜಾಮೀನು ತೀರ್ಪು
ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಳ್ತಂಗಡಿ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದ್ದು, ಸೆ. 16ರಂದು ಪ್ರಕಟಿಸುವುದಾಗಿ ಹೇಳಿದೆ.
ದಾಖಲೆ ಪರಿಶೀಲನೆ..
ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶವ ದಫನ ದಾಖಲೆಗಳತ್ತವೂ ಎಸ್‌ಐಟಿ ಗಮನ ಕೇಂದ್ರೀಕರಿಸಿದೆ.ಶವಗಳ ದಫನದಲ್ಲೇ ಅಕ್ರಮ ಎಸಗಲಾಗಿದೆ. ಹೆಣಗಳನ್ನು ಹೂತು ಹಾಕಲು ಫೋರ್ಜರಿ ದಾಖಲೆ ಸೃಷ್ಟಿಸಲಾಗಿದೆ ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಆರೋಪಿಸಿದ್ದರು. ಎಸ್‌ಐಟಿ ಕಚೇರಿಗೆ ದಾಖಲೆಗಳನ್ನೂ ಸಲ್ಲಿಸಿದ್ದರು. ಹೀಗಾಗಿ ಪಂಚಾಯತ್ ದಫನ ದಾಖಲೆಗಳ ಆಳವಾದ ಪರಿಶೀಲನೆಗೆ ಎಸ್‌ಐಟಿ ಮುಂದಾಗಿದೆ.
ಸಮೀರ್‌ಗೆ ಮನೆ ಸಿಗುತ್ತಿಲ್ಲ..
ಧರ್ಮಸ್ಥಳದ ವಿರುದ್ಧ ಎಐ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರಿಂದ ಸತತ ವಿಚಾರಣೆಗೊಳಗಾದ ಯುಟ್ಯೂಬರ್ ಸಮೀರ್ ಎಂ. ಡಿ. ಯುಟ್ಯೂಬ್ ವಿಡಿಯೋದಲ್ಲಿ ಮಾತನಾಡಿ ‘ನನಗೆ ವಿದೇಶದಿಂದ ಫಂಡ್ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತಗೆದುಕೊಂಡಿದ್ದರೆ ತನಿಖೆಯಿಂದ ಹೊರ ಬರುತ್ತಿತ್ತು. ಪೊಲೀಸರಿಗೆ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ಪೊಲೀಸರು ತನಿಖೆ ಮಾಡಲಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುವವರನ್ನ ಯಾರೂ ಪ್ರಶ್ನೆ ಮಾಡುವುದಿಲ್ಲ.
ಇವತ್ತು ನನಗೆ ಮನೆ ಇಲ್ಲ. ಯಾವುದೋ ಒಂದು ಪುಟ್ಟ ಬಾಡಿಗೆ ಮನೆಯಲ್ಲಿದ್ದೆವು. ಪೊಲೀಸರು ತನಿಖೆಗೆ ಎಂದು ಮನೆಗೆ ಬಂದರು. ಅದಾದ ನಂತರ ಮನೆಯ ಮಾಲಕರು ನಮ್ಮನ್ನ ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇಂದು ಸಮೀರ್ ಎಂಡಿ ಅಂದರೆ ಯಾರೂ ಮನೆ ಕೊಡ್ತಿಲ್ಲ. ಸಮೀರ್ ಎಂಡಿ ಅಂದರೆ ಜನ ಹೆದರಿಕೊಳ್ಳುತ್ತಿದ್ದಾರೆ ಎಂದಿದ್ದಾನೆ.