ಧರ್ಮಸ್ಥಳ ಪ್ರಕರಣ: ಗೊಂದಲ ಮೂಡಿಸುತ್ತಿರುವ ಎಸ್‌ಐಟಿ ವಿಚಾರಣೆ
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯೇ ಗಂಭೀರತೆ ಕಳೆದುಕೊಂಡು, ಗೊಂದಲ ಮೂಡಿಸುತ್ತಿದೆಯೇ ಎಂಬ ಸಂಶಯ ಮೂಡಿದೆ.
ಸುದೀರ್ಘ ಅವಧಿಗೆ ತನಿಖೆ ನಡೆಯುತ್ತಿದ್ದರೂ ಪ್ರಕರಣ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಸಾಕ್ಷ್ಯಾಧಾರಗಳಿದ್ದರೂ ಸಂಬಂಧಿತರ ಬಂಧನವಾಗುತ್ತಿಲ್ಲ. ದಿನ ನಿತ್ಯ ವಿಚಾರಣೆ ನಡೆಯುತ್ತಿದೆ. ತನಿಖೆಗೆ ಬರುತ್ತಿರುವವರು ತನಿಖೆ ಎದುರಿಸಿ ನಗು ಮುಖದಿಂದಲೇ ಮಾಧ್ಯಮದವರ ಮುಂದೆ ಹೇಳಿಕೆ ನೀಡಿ ಹೋಗುತ್ತಿದ್ದಾರೆ.
ಈ ನಡುವೆ ದಿನಪೂರ್ತಿ ವಿಚಾರಣೆ ಎದುರಿಸಿದ ಸೌಜನ್ಯ ಮಾವ ವಿಠಲ ಗೌಡ ಎಸ್‌ಐಟಿ ತನಿಖೆ, ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಮಹಜರು ವೇಳೆ ಬಾಯಿ ಬಿಡದೆ ತನಿಖೆ ಮುಗಿದ ನಂತರ ಯುಟ್ಯೂಬ್‌ನಲ್ಲಿ ವಿಡಿಯೋ ಹರಿಯಬಿಟ್ಯ ಬಂಗ್ಲೆಗುಡ್ಡೆಯಲ್ಲಿ ಹೆಣಗಳ ರಾಶಿಯೇ ದೊರೆತಿದೆ ಎನ್ನುತ್ತಿರುವುದು ಒಟ್ಟು ಗೊಂದಲ ಮೂಡಿಸುತ್ತಿದೆ.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಆಗೊಮ್ಮೆ ಈಗೊಮ್ಮೆ ಬೆಳ್ತಂಗಡಿಗೆ ಬಂದು ಹೋಗುತ್ತಿದ್ದಾರೆ. ಆ.15ರಿಂದ 30ರ ತನಕ ರಜೆಯಲ್ಲಿದ್ದ ತನಿಖಾ ತಂಡದ ಅನುಚೇತ್ ಬೆಳ್ತಂಗಡಿಗೆ ಬಂದಿಲ್ಲ. ತನಿಖಾಧಿಕಾರಿ ಜಿತೇಂದ್ರ ದಯಾಮ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಬಳಿಕ ಹೆಚ್ಚೇನೂ ಸಕ್ರಿಯವಾಗಿಲ್ಲ. ಎಸ್‌ಐಟಿ ಎಸ್ಪಿ ಸಿ. ಎ. ಸೈಮನ್ ಮತ್ತು ಮಂಜುನಾಥ್ ನೇತೃತ್ವದಲ್ಲಿ ದಿನನಿತ್ಯ ತನಿಖೆ ನಡೆಯುತ್ತಿದೆ.
ತಿಮರೋಡಿ ದೂರು..
ಧರ್ಮಸ್ಥಳ ಗ್ರಾಮದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ವಿಶೇಷ ತನಿಖಾ ತಂಡದ ಬೆಳ್ತಂಗಡಿ ಕಚೇರಿಗೆ ತೆರಳಿ ಗುರುವಾರ ರಾತ್ರಿ ದೂರು ನೀಡಿದ್ದಾರೆ. 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವ ಸಾಧ್ಯತೆ ಇರುವುದರಿಂದ ವಿಶೇಷ ತನಿಖಾ ದಳವು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರಿಗೆ ಪೂರಕವಾಗಿ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ನೀಡಿದ್ದಾರೆ.
ಮೂರು ವಸತಿ ಗೃಹಗಳಲ್ಲಿ ನಡೆದ ನಾಲ್ಕು ಅಸಹಜ ಸಾವುಗಳ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಇವುಗಳನ್ನು ಗುರುತು ಪತ್ತೆಯಾಗದ ಶವಗಳೆಂದು ಘೋಷಿಸಿ ಗ್ರಾಮ ಪಂಚಾಯಿತಿ ಮೂಲಕ ತರಾತುರಿಯಲ್ಲಿ ದಫನ ಮಾಡಲಾಗಿದೆ. ಈ ಬಗ್ಗೆ ಕೇವಲ ಅಸಹಜ ಮರಣ ಪ್ರಕರಣ ದಾಖಲಿಸಲಾಗಿದೆ. ಕೊಲೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಈ ಬಗ್ಗೆ ಎಫ್.ಐ.ಆರ್ ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ
ವಿಠಲ ಗೌಡ ವಿಡಿಯೋ..
ಸೌಜನ್ಯ ಮಾವ ವಿಠಲ ಗೌಡ ಅವರನ್ನು ಬಂಗ್ಲಗುಡ್ಡ ಪ್ರದೇಶದಲ್ಲಿ ಮಹಜರಿಗೆ ಕರೆದುಕೊಂಡ ಹೋದ ವೇಳೆ ಅಲ್ಲಿ ಹೆಣಗಳ ರಾಶಿಯೇ ಸಿಕ್ಕಿದೆ ಎಂದು ಹೇಳಿದ್ದಾರೆ.
ಯುಟ್ಯೂಬ್ ವಿಡಿಯೋದಲ್ಲಿ ಮಾತನಾಡಿದರುವ ಅವರು ಬಂಗ್ಲೆಗುಡ್ಡ ಪ್ರದೇಶಕ್ಕೆ ಎರಡು ಸಲ ಕರೆದಕೊಂಡು ಹೋಗಿದ್ದಾರೆ. ಸ್ಪಾಟ್ ಮಹಜರಿಗೆ ಕರೆದುಕೊಂಡು ಹೋದಾಗ ಅಲ್ಲಿ ಮೂರು ಮನುಷ್ಯರ ಕಳೆ ಬರಹ ಸಿಕ್ಕಿದೆ. ಬಳಿಕ ಅಲ್ಲೆ ಪಕ್ಕದ ಒಂದು 10 ಅಡಿಯಲ್ಲಿ ಎರಡನೇ ಸ್ಥಳ ಮಹಜರಿಗೆ ಹೋದಾಗ ಅಲ್ಲಿ ಕೆಳಗಡೆ ಹೆಣಗಳ ರಾಶಿ ಕಾಣಿಸಿದೆ. ಕಣ್ಣಿಗೆ ಕಂಡದ್ದು ೫ ಹೆಣಗಳು, ಸಣ್ಣ ಮಗುವಿನ ಎಲುಬು ಇದೆ ಎಂದು ಗೋಚರ ಆಗುತ್ತಿತ್ತು ಎಂದಿದ್ದಾರೆ. ಅಲ್ಲೆ ಪಕ್ಕದಲ್ಲಿ ಈ ವಾಮಾಚಾರಕ್ಕೆ ಬಳಸುವಂತಹ ಕಳಶದ ವಸ್ತುಗಳು ಇದ್ದವು ಎಂದಿದ್ದಾರೆ.
ಹೆಣವನ್ನು ಮುಚ್ಚು ಹಾಕಲು ಮಣ್ಣು ಗುಡ್ಡ ಜರಿದ ರೀತಿ ಇದ್ದು, ಅಲ್ಲಿ ಬುರಡೆಗಳ ರಾಶಿ ಇದ್ದು, ಎಲುಬುಗಳೆಲ್ಲಾ ಹರಡಿದೆ. ಕಳೇಬರಹ ಕೆಲವು ಮಣ್ಣಿನ ಒಳಗಡೆ ಇದ್ದು, ಬುರುಡೆ ಹೊರಗಡೆ ಇತ್ತು. ತನಿಖೆಗೆ ಯಾವಾಗ ಕರೆದರೂ ಬರುತ್ತೇನೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.
ಗೌಪ್ಯ ಪರಿಶೀಲನೆ..
ಬಂಗ್ಲೆಗುಡ್ಡೆ ರಹಸ್ಯದ ಪತ್ತೆಗೆ ಗುರುವಾರ ಸಂಜೆ ಎಸ್‌ಐಟಿ ಗೌಪ್ಯವಾಗಿ ಪರಿಶೀಲನೆ ನಡೆಸಿದೆ. ಎಸ್‌ಐಟಿ ಎಸ್ಪಿ ಸೈಮನ್ ನೇತೃತ್ವದಲ್ಲಿ ತಂಡ ಬಂಗ್ಲೆಗುಡ್ಡೆಗೆ ತೆರಳಿ ವಿಠಲ ಗೌಡ ಆರೋಪಿಸಿದಂತೆ ಬೇರೆ ತಲೆಬುರುಡೆ, ಅಸ್ಥಿಪಂಜರ ಇದೆಯಾ ಎಂದು ಪರಿಶೀಲನೆ ನಡೆಸಿ ಮರಳಿದೆ.