ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು

ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು


ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಬಳಿ ನಾಲ್ಕು ವಿದ್ಯಾರ್ಥಿಗಳು ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಿ ಎಲ್ಲರ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯವು ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮುಜುಗರ ತಂದಿದೆ. 

ವಿದ್ಯಾರ್ಥಿಗಳ ಈ ಕಾರ್ಯದ ಬಳಿಕ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಮಂಗಳೂರಿನ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಗುಂಡಿಗಳಿಂದ ತುಂಬಿದೆ. ಇದರಿಂದಾಗಿ ಅಪಘಾತಗಳೂ ಹೆಚ್ಚುತ್ತಿದ್ದು, ಜನರ ಜೀವಕ್ಕೆ ಅಪಾಯ ತಂದೊಡ್ಡಿವೆ. ರಸ್ತೆಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದಾಗ್ಯೂ ಮಂಗಳೂರು ಮಹಾನಗರ ಪಾಲಿಕೆ ಮತ್ತು ಚುನಾಯಿತ ಪ್ರತಿನಿಧಿಗಳು ರಸ್ತೆ ದುರಸ್ತಿ ಮಾಡಿಸುವಲ್ಲಿ ವಿಫಲರಾಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದಲೂ ರಸ್ತೆಗಳು ಹೊಂಡಗಳಿಂದ ತುಂಬಿ ಹೋಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನೆಲೆ ಆಟೋ ಚಾಲಕರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಗರಿಕರು ಸ್ವತಃ ತಾವೇ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ.

ಇದೀಗ ಮಂಗಳೂರಿನ ನಾಲ್ಕು ವಿದ್ಯಾರ್ಧಿಗಳಾಗ ಮೊಹಮ್ಮದ್ ಅಯಾನ್, ಮೊಹಮ್ಮದ್ ಅಮನ್ ಮತ್ತು ಅವರ ಇಬ್ಬರು ಸ್ನೇಹಿತರು, ಸೆ. 9ರಂದು ಬಂಟ್ಸ್ ಹಾಸ್ಟೆಲ್ ಬಳಿ ರಸ್ತೆಗುಂಡಿ ಮುಚ್ಚಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯದ ಬಳಿಕ ನಗರ ಪಾಲಿಕೆ ವತಿಯಿಂದ ಗುಂಡಿ ಮುಚ್ಚುವ ಕಾರ್ಯ ನಡೆಸಲಾಯಿತು. 

"ಮಹಾನಗರ ಪಾಲಿಕೆ ತನ್ನ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಿದೆ. ಗುಂಡಿಗಳಿಂದಾಗಿ ಅನೇಕ ಸವಾರರು ನಿಯಂತ್ರಣ ಕಳೆದುಕೊಂಡು ಗಾಯಗೊಂಡಿರುವುದನ್ನು ನಾವು ನೋಡಿದ್ದೇವೆ. ಅಪಘಾತಗಳಾದಾಗ, ಯಾವುದೇ ರಾಜಕಾರಣಿಗಳು ಸಹಾಯ ಮಾಡಲು ಬರುವುದಿಲ್ಲ. ಅವರಿಗೆ ಅದರ ಬಗ್ಗೆ ಚಿಂತೆಯೂ ಇಲ್ಲ. ಮಕ್ಕಳಾದ ನಾವು ರಸ್ತೆ ಗುಂಡಿಗಳನ್ನು ಮುಚ್ಚುವುದನ್ನು ನೋಡಿ ಅವರು ನಾಚಿಕೆಪಡಬೇಕು ಎಂದು ನಾವು ಬಯಸುತ್ತೇವೆ" ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಹಂಪನಕಟ್ಟೆ ವೃತ್ತ, ನಂತೂರ್ ಮತ್ತು ಇತರ ಅಪಘಾತ-ಪೀಡಿತ ಪ್ರದೇಶಗಳಲ್ಲಿನ ಗುಂಡಿಗಳನ್ನು ಮುಚ್ಚಲು ಯೋಜಿಸಿದ್ದೇವೆ. "ನಾವು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಮತ್ತು ಜೀವಗಳನ್ನು ಉಳಿಸಲು ಸಹಾಯ ಮಾಡಲು ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ನಾವು ’ಮಂಗಳೂರು ಕೇರ್‌ಲೆಸ್ ಕಾರ್ಪೊರೇಷನ್ (ಎಂಸಿಸಿ)’ ಎಂದು ಬ್ಯಾನರ್ ಕೂಡ ಹಾಕಿದ್ದೇವೆ. ಇದು ಅನೇಕ ಜನರಿಗೆ ಹಾಸ್ಯಾಸ್ಪದವಾಗಿ ಮತ್ತು ಯೋಚನೆಗೆ ಎಡೆಮಾಡಿಕೊಟ್ಟಿದೆ" ಎಂದು ಮೊಹಮ್ಮದ್ ಅಮನ್ ತಿಳಿಸಿದ್ದಾರೆ.

ಈ ವಿದ್ಯಾರ್ಥಿಗಳ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಹೊಣೆಗಾರಿಕೆಯ ಬಗ್ಗೆ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article