ಹಳೆ ವಿದ್ಯಾರ್ಥಿಗಳ ಸಮಾವೇಶ
ಮಂಗಳೂರು: ಮಂಗಳೂರಿನ ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ರೂಪಿಸುವ ಸಲುವಾಗಿ ಸೆ.19ರಂದು ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ ಮುಹಮ್ಮದ್ ಕುಂಞ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬದ್ರಿಯಾ ಕ್ಯಾಂಪಸ್ಸಿನಲ್ಲಿ ಅಂದು ಸಂಜೆ 4ರಿಂದ 6ರವರೆಗೆ ಸಮಾವೇಶ ನಡೆಯಲಿದೆ. ದೇಶ ವಿದೇಶಗಳಿಂದ ಹಲೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಬದ್ರಿಯಾ ವಿದ್ಯಾ ಸಂಸ್ಥೆಯ ಸಮಗ್ರ ಅಭಿವೃದ್ಧಿ ಮತ್ತು ವಿವಿಧ ಯೋಜನೆಗಳ ಬಗ್ಗೆ ಪ್ರಮುಖರ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
1928ರಲ್ಲಿ ಆರಂಭವಾದ ಬದ್ರಿಯಾ ವಿದ್ಯಾಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ರೂಪಿಸಿದೆ. ಇಲ್ಲಿ ಕೆಜಿಯಿಂದ ಡಿಗ್ರಿವರೆಗೆ ವಿವಿಧ ಕೋರ್ಸ್‌ಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಹಳೆ ವಿದ್ಯಾರ್ಥಿಗಳಾದ ಖಲೀಲ್, ಫಾರೂಕ್ ಎಸ್.ಎ., ಮುಕ್ತಾರ್, ಅಬ್ದುಲ್ ಲತೀಫ್, ಶಹೀದ್, ಶಂಶುದ್ದೀನ್ ಉಪಸ್ಥಿತರಿದ್ದರು.