ಮೀಸಲು ಹಣ ದುರ್ಬಳಕೆ: ಇಡಿ ತನಿಖೆಗೆ ಗೃಹ ಸಚಿವರಿಗೆ ಪತ್ರ

ಮೀಸಲು ಹಣ ದುರ್ಬಳಕೆ: ಇಡಿ ತನಿಖೆಗೆ ಗೃಹ ಸಚಿವರಿಗೆ ಪತ್ರ

ಮಂಗಳೂರು: ಎಸ್‌ಡಿಎಂ ಎಜುಕೇಶನ್ ಟ್ರಸ್ಟ್ ಮತ್ತು ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಹೆಸರಿನಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರದಿಂದ ನೀಡಲಾಗುವ ಮೀಸಲು ಹಣದ ದುರ್ಬಳಕೆಯಾಗಿದೆ. ಈ ಬಗ್ಗೆ ಇಡಿ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ ಹಾಗೂ ನಾಗರಿಕ ಸೇವಾ ಟ್ರಸ್ಟ್‌ನಿಂದ ಪತ್ರ ಬರೆಯಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಸೋಮನಾಥ ನಾಯಕ್, ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಈ ಸಂಸ್ಥೆಗಳು ದಶಕಗಳಿಂದ ಅವ್ಯಹಾರ ನಡೆಸಿಕೊಂಡು ಬರುತ್ತಿದ್ದು, ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ತೆಗೆದ ದಾಖಲೆಗಳ ಆಧಾರದಲ್ಲಿ ಆರೋಪವನ್ನು ಮಾಡಲಾಗುತ್ತಿದೆ ಎಂದರು.

ಮಾಹಿತಿ ಹಕ್ಕಿನಡಿ ಇತ್ತೀಚೆಗೆ ಪಡೆದ ಮಾಹಿತಿಯಂತೆ ಈ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಲ್ಲಿ 2025ರ ಮಾರ್ಚ್ 31ರವರೆಗೆ ಶೇ. 18ರ ಮೀಸಲಾತಿಯಡಿ ಬೋಧಕೇತರ ಹುದ್ದೆಯಲ್ಲಿದ್ದರ ಸಂಖ್ಯೆ 4 ಹಾಗೂ ಬೋಧಕ ಹುದ್ದೆಯಲ್ಲಿದ್ದವರ ಸಂಖ್ಯೆ 1. ಪ್ರಸ್ತುತ ಬೋಧಕೇತರ ಹುದ್ದೆಯಲ್ಲಿ ಅಟೆಂಡರ್ ಆಗಿ ಓರ್ವ ಮಾತ್ರ ದಲಿತ ಸಮುದಾಯದವರನ್ನು ನೇಮಕ ಮಾಡಲಾಗಿದೆ. ಆದರೆ ಕಾನೂನು ಪ್ರಕಾರ ಶೇ. 18ರ ಅನುದಾನವನ್ನು ಇಷ್ಟು ವರ್ಷಗಳಿಂದ ಪಡೆಯಲಾಗುತ್ತಿದೆ. ಇದು ದಲಿತ ದೌರ್ಜನ್ಯ ಪ್ರಕರಣ ಎಂದವರು ಆರೋಪಿಸಿದರು.

ಹೈಸ್ಕೂಲ್‌ಗಳಲ್ಲಿ ಶೇ.18ರಡಿ ನೇಮಕ ಮಾಡಲಾಗಿರುವ ಬೋಧಕ ಹಾಗೂ ಬೋಧಕೇತರರ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ. ಇದು ಸರಕಾರದ ಹಣದ ದುರುಪಯೋಗವೂ ಆಗಿರುವುದರಿಂದ ಇಡಿ ತನಿಖೆ ಅಗತ್ಯವಾಗಿದೆ ಎಂದವರು ಹೇಳಿದರು.

ಹಲವಾರು ಅಕ್ರಮ ಭೂ ವ್ಯವಹಾರಗಳ ಕುರಿತಂತೆ ದಾಖಲೆಗಳ ಸಹಿತ ನೀಡಲಾದ ಮನವಿಯ ಮೇರೆಗೆ 2017ರಲ್ಲಿ ಅಂದಿನ ಮುಖ್ಯಮಂತ್ರಿ ಕಂದಾಯ ಸಚಿವರು ಸಮಗ್ರ ತನಿಖೆ ನಡೆಸಲು ನಿರ್ದೇಶನ ನೀಡಿದ್ದರೂ ಈವರೆಗೆ ತನಿಖೆಯಾಗಿಲ್ಲ. ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ನಿಗದಿತ ಕಾಲವಮಿತಿಯಲ್ಲಿ ತನಿಖೆ ನಡೆಸುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಲಾಗಿದೆ ಎಂದರು.

ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವು ಅಪರಾಧಗಳ ಕುರಿತು ಕಾನೂನು ಪ್ರಕಾರ ತನಿಖೆ ಆಗಬೇಕು. ನಿರಂತರವಾಗಿ ಕಾನೂನು ಉಲ್ಲಂಘನೆ ಆಗುತ್ತಿರುವ ಹಿಂದಿರುವ ಮರ್ಮವೇನು ಎಂಬುದು ಜನತೆಗೆ ತಿಳಿಯಬೇಕು. ಸಾರ್ವಜನಿಕವಾಗಿ ಎತ್ತಲಾಗಿರುವ ಆಕ್ಷೇಪಗಳ ಬಗ್ಗೆ ಸಭೆಯನ್ನು ನಡೆಸಿ ಉತ್ತರಿಸಿ. ನಾವು ಎಲ್ಲಿಗೆ ಬೇಕಾದರೂ ಬರಲು ಸಿದ್ಧ ಎಂಬುದನ್ನು ಹೇಳಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸತ್ತಿನ ಸದಸ್ಯರಾಗಿರುವವರು ಸಾರ್ವಜನಿಕವಾಗಿ ಕೇಳಿಬರುವ ಆಕ್ಷೇಪಗಳಿಗೆ ಉತ್ತರ ನೀಡುವ ಜವಾಬ್ಧಾರಿಯನ್ನು ಹೊಂದಿರುತಾರೆ. ಉತ್ತರಿಸದಿದ್ದರೆ ಆರೋಪವನ್ನು ಒಪ್ಪಿಕೊಂಡ ಹಾಗೆ. ಸಭೆ ನಡೆಸಿ ಪ್ರಶ್ನೆಗಳಿಗೆ ಉತ್ತರ ನೀಡುವ ವ್ಯವಸ್ಥೆ ಆಗಲಿ ಎಂದು ಹೇಳಿದರು. 

ರಾಷ್ಟ್ರೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನರೇಂದ್ರ ನಾಯಕ್, ನಾಗರಿಕ ಸೇವಾ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ರಂಜನ್ ರಾವ್ ಯರ್ಡೂರ್, ಭಾರತೀಯ ಮಜ್ದೂರ್ ಸಂಘದ ಕೆ. ವಿಶ್ವನಾಥ ಶೆಟ್ಟಿ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ವಿದ್ಯಾ ನಾಯಕ್, ದಲಿತ ಭೂ ಹಕ್ಕೊತ್ತಾಯ ಸಮಿತಿಯ ಸಂಚಾಲಕರಾದ ಎಂ.ಬಿ. ಕರಿಯ, ಬಾಬು ಎ., ರಾಘವೇಂದ್ರ ಆಚಾರ್, ಆಶಾ ಸೀನಪ್ಪ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article