ಕೊಂಕಣಿ ಭಾಷೆಯಲ್ಲಿ ವಿಚಾರಗೋಷ್ಠಿ
ಮಂಗಳೂರು: ‘ಸ್ಮಾರ್ಟ್ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳ ಮೂಲಕ ಆರೋಗ್ಯ ಸುಧಾರಿಸುವುದು’ ಎಂಬ ಶಿರ್ಷಿಕೆಯಡಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಸಹಯೋಗದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಭಾಷೆಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಸೆ.11 ಮತ್ತು 12ರಂದು ಕೊಂಕಣಿ ಭಾಷೆಯಲ್ಲಿ ಆಯೋಜಿಸಲಾಗಿದೆ.
ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಸಚಿವ ಡಾ. ರೊನಾಲ್ಡ್ ನಝರತ್, ಕೊಂಕಣಿ ಭಾಷೆಯಲ್ಲಿ ನಡೆಯುವ ಪ್ರಥಮ ವಿಜ್ಞಾನ ಸಮ್ಮೇಳನ ಇದಾಗಿದೆ. ಈ ವಿಚಾರಸಂಕಿರಣವು ಭಾರತೀಯ ಭಾಷೆಗಳ ಪ್ರಗತಿ ಮತ್ತು ಪೋಷಣೆಗಾಗಿ ಸ್ಪಂದಿಸುವ ಎಐಸಿಟಿಇ-ವಾಣಿ ಯೋಜನೆಯಡಿಯಲ್ಲಿ ಪ್ರಾಯೋಜಿತವಾಗಿದೆ ಎಂದರು.
ಸೆ.11ರಂದು ಬೆಳಗ್ಗೆ 9.15ಕ್ಕೆ ವಿಶ್ವವಿದ್ಯಾನಿಲಯದ ಎಲ್ ಎಫ್ ರಸ್ಕಿನ್ಹಾ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ನ ಪ್ರಾಧ್ಯಾಪಕ ಡಾ. ಎಡ್ವರ್ಡ್ ನಜರೆತ್ ಮುಖ್ಯ ಅಥಿತಿಯಾಗಿ ಭಾಗವಹಿಸ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹ ಪ್ರಾಧ್ಯಾಪಕ ಸಹಾಯಕ ಪ್ರಾಧ್ಯಾಪಕ ಡಾ. ರಾಕೇಶ್ ಸೆರಾ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಜಾಯ್ಲೀನ್ ಡಿ ಅಲ್ಮೇಡಾ, ಡಾ. ರಿತೇಶ್ ಡಿಕುನ್ಹಾ, ಡಾ. ವೀಣಾ ಜಾಸ್ಮಿನ್ ಪಿಂಟೋ, ಚೆನ್ನೈನ ಹಿರಿಯ ವಿಜ್ಞಾನಿ, ಡಾ. ನಿತಿನ್ ಪಿ.ಲೋಬೋ, ಕೆಎಂಸಿಯ ಸಂಧಿವಾತ ತಜ್ಞ ಡಾ. ಸಜ್ಜನ್ ಶೆಣೈ, ಶ್ರೀ ನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ. ಶಶಿಧರ್ ಕಿಣಿ ಕೆ., ಎಂಆರ್ಪಿಎಲ್ ಮುಖ್ಯ ಮಹಾಪ್ರಬಂಧಕ ಡಾ. ರುಡಾಲ್ ಜೋಯರ್ ನೊರೊನ್ಹಾ ಅವರು ಸಮಾವೇಶದಲ್ಲಿ ತಮ್ಮ ಪ್ರಬಂಧ ಮಂಡಿಸಲಿದ್ದಾರೆ ಎಂದರು.
ಸಂತ ಅಲೋಸಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ, ಕಾರ್ಯಕ್ರಮ ಸಂಯೋಜಕಿ ಡಾ. ರೀಟಾ ಕ್ರಾಸ್ತ, ಸಹ ಸಂಯೋಜಕಿ, ಫ್ಲೋರಾ ಕ್ಯಾಸ್ಟಲಿನೊ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ನೀಲಕಂಠನ್ ವಿ.ಕೆ., ಮಾಹಿತಿ ಸಂಪರ್ಕ ವಿಭಾಗದ ಚಂದ್ರಕಲಾ ನಾಯಕ್ ಉಪಸ್ಥಿತರಿದ್ದರು.