ಧರ್ಮಸ್ಥಳ ಪ್ರಕರಣ: ಚಿನ್ನಯ್ಯನ ಜಾಮೀನು ಅರ್ಜಿ ವಜಾ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ಸೆ.16ರಂದು ವಜಾಗೊಂಡಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಮೃತದೇಹ ಹೂತುಹಾಕಿರುವುದಾಗಿ ಹೇಳಿ ಬುರುಡೆ ಜೊತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ ಬಳಿಕ ಹಲವಾರು ಬೆಳವಣಿಗಳು ನಡೆದಿದ್ದವು.
ಬೆಳ್ತಂಗಡಿ ಎಸ್‌ಐಟಿ ಅಧಿಕಾರಿಗಳು ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.23ರಂದು ಚಿನ್ನಯ್ಯನನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, 12 ದಿನಗಳ ಕಾಲ ಕಸ್ಟಡಿಗೆ ಪಡೆದ ತನಿಖೆ ನಡೆಸಿ ಸೆ.3 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ಚಿನ್ನಯ್ಯನನ್ನು ಮತ್ತೆ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಿ ಸೆ.6 ರಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಸದ್ಯ ಆರೋಪಿ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿದ್ದಾನೆ.
ಚಿನ್ನಯ್ಯ ಪರ ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು ಪಡೆದುಕೊಂಡು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಸೆ.12 ಕ್ಕೆ ಜಾಮೀನು ಅರ್ಜಿ ವಾದ ವಿವಾದ ಮಾಡಿ ಸೆ.16ಕ್ಕೆ ಜಾಮೀನು ಅರ್ಜಿ ಆದೇಶಕ್ಕೆ ನಿಗದಿಪಡಿಸಿದ್ದರು.
ಆರೋಪಿ ಚಿನ್ನಯ್ಯನ ಪ್ರಕರಣ ಗಂಭೀರವಾಗಿದ್ದು, ಪ್ರಕರಣದ ತನಿಖೆ ಜಿಲ್ಲಾ ಸೆಕ್ಷನ್ ಕೋರ್ಟ್ ಅಗಿದ್ದು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ಹೆಚ್ಚಿನ ತನಿಖೆ ಮಾಡುವ ಅವಶ್ಯಕತೆ ಇದೆ ಎಂದು ಸೆ.16 ರಂದು ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯೇಂದ್ರ ಟಿಎಚ್ ಜಾಮೀನು ಅರ್ಜಿ ವಜಾ ಮಾಡಿ ಆದೇಶ ನೀಡಿದ್ದಾರೆ.
ಎಸ್‌ಐಟಿ ಗೊಂದಲ..
ಬಂಗ್ಲೆಗುಡ್ಡಿಯಲ್ಲಿ ಅಸ್ಥಿಪಂಜರ ಶೋಧ ಮಾಡುವ ಬದಲು ಅರಣ್ಯ ಇಲಾಖೆಯಿಂದ ಸರ್ವೇ ವರದಿ ಕೇಳಿದೆ. ಸ್ಥಳದ ಕಾನೂನು ಹಕ್ಕು ನಿರ್ಧಾರ ಮಾಡಲು ವರದಿ ಕೇಳಿರುವ ಸಾಧ್ಯತೆ ಇದೆ. ಬಂಗ್ಲೆಗುಡ್ಡೆ
ಕಾಡಿನ ಮಧ್ಯ ಭಾಗದಲ್ಲಿ ಶವ ಶೋಧ ಹಿನ್ನೆಲೆಯಲ್ಲಿ ಕಾನೂನು ತೊಡಕು ಎದುರಾಗುತ್ತದೆ. ಅದು ಮೀಸಲು ಅರಣ್ಯವಾದ ಕಾರಣ ಅಗೆದು ಶೋಧ ಕಾರ್ಯ ನಡೆಸಲು ಅಡ್ಡಿಯಾಗಿದೆ. ಅರಣ್ಯ ಹಕ್ಕು, ವ್ಯಾಪ್ತಿಯ ಗಡಿ, ಜವಾಬ್ದಾರಿ ಯಾರದು ಎಂಬುದನ್ನು ದಾಖಲೆ ಆಧಾರದ ಮೇಲೆ ದೃಢೀಕರಿಸಲು ಎಸ್‌ಐಟಿ ನಿರ್ಧರಿಸಿದೆ.
ಹೈಕೋರ್ಟ್ ಆದೇಶದಂತೆ ಮತ್ತೆ ಅಸ್ಥಿಪಂಜರ ಶೋಧ ವಿಚಾರದಲ್ಲಿ ಎಸ್‌ಐಟಿ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಂಗ್ಲೆಗುಡ್ಡದಲ್ಲಿ ಮಹಜರ್ ನಡೆಸುವ ಕುರಿತಂತೆಎಸ್‌ಐಟಿ ಅಧಿಕಾರಿಗಳು ಕಾನೂನು ತಜ್ಞರ ಸಲಹೆ ಕೇಳಲು ನಿರ್ಧರಿಸಿದ್ದಾರೆ.
ಬುರುಡೆ ತಂದ ಸೌಜನ್ಯ ಮಾವ ವಿಠಲ ಗೌಡ ತೋರಿಸುವ ಜಾಗದಲ್ಲಿ ಮಾತ್ರ ಶೋಧ ನಡೆಸಬೇಕೇ ಅಥವಾ ಸಂಪೂರ್ಣ ಬಂಗ್ಲೆಗುಡ್ಡದಲ್ಲಿ ಶೋಧ ನಡೆಸಬೇಕೇ ಎಂಬ ಗೊಂದಲ ಎಸ್‌ಐಟಿಯಲ್ಲಿದೆ. ಧರ್ಮಸ್ಥಳ ಗ್ರಾಮದ ಸುತ್ತ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸಾಕ್ಷ್ಯವಾಗಿ ಚೆನ್ನಯ್ಯ ಬುರುಡೆಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದನು. ಈ ಬುರುಡೆಯನ್ನು ಬಂಗ್ಲೆಗುಡ್ಡೆಯಿಂದ ವಿಠಲ ಗೌಡ ತಂದಿದ್ದರು. ಸ್ಥಳ ಮಹಜರು ಸಂದರ್ಭ ಹಲವಾರು ಅಸ್ಥಿಪಂಜರವನ್ನು ಅಲ್ಲಿ ನೋಡಿದ್ದಾಗಿ ವಿಛಲ ಗೌಡ ಹೇಳಿಕೆ ನೀಡಿದ್ದರು. ಆದ್ದರಿಂದ ಮತ್ತೊಮ್ಮೆ ಶೋಧ ನಡೆಸಲು ಎಸ್‌ಐಟಿ ಸಿದ್ಧತೆ ನಡೆಸಿದೆ.