ಕಡಂದಲೆ-ಪಾಲಡ್ಕ ಬಿಲ್ಲವ ಸಂಘದಲ್ಲಿ ಗುರುಪೂಜೆ
ವಕೀಲೆ ಮೇಘರಾಣಿ ಧಾರ್ಮಿಕ ಉಪನ್ಯಾಸ ನೀಡಿ, ನಾರಾಯಣ ಗುರುಗಳ ತತ್ವಗಳನ್ನು ಅರ್ಥ ಮಾಡಿಕೊಂಡು ನಾವು ನಮ್ಮ ಸಮಾಜದ ಏಳಿಗೆ ಮಾಡಬೇಕು. ನಮ್ಮಲ್ಲಿರುವ ಪ್ರತಿಭೆ, ಶಕ್ತಿಯಿಂದ ಸಂಘಟನೆಯ ಮುಖಾಂತರ ಸಮುದಾಯವನ್ನು ಬಲಿಷ್ಠಗೊಳಿಸಬೇಕೆಂದರು.
ಯುವವಾಹಿನಿ ಮೂಡುಬಿದಿರೆ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದ ಮಕ್ಕಳು ವಿದ್ಯಾವಂತರಾಗುವ ಮೂಲಕ ಬಿಲ್ಲವ ಸಮುದಾಯಕ್ಕೆ ಬಲ ತುಂಬಬೇಕು. ಹಿಂದೆ ಶಿಕ್ಷಣ ಎನ್ನುವುದು ಕನಸಾಗಿತ್ತು. ಇಂದು ಉತ್ತಮ ಶಿಕ್ಷಣ ಪಡೆಯಲು ಹಲವಾರು ಅವಕಾಶಗಳಿವೆ ಎಂದು ಸಂಘದ ವಿದ್ಯಾನಿಧಿಗೆ 10 ಸಾವಿರ ರೂ. ದೇಣಿಗೆಯನ್ನು ನೀಡಿದರು. ಸಂಘದ ಅಧ್ಯಕ್ಷ ಲೀಲಾಧರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಕೀಲೆ ಮೇಘರಾಣಿ ಹಾಗೂ ಪತ್ರಕರ್ತ ಜಗದೀಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಕಳ ಆನೆಕೆರೆ ಶ್ರೀಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕ ಸದಾನಂದ ಶಾಂತಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರಾವ್ಯ, ವೈಷ್ಣವಿ ಎಚ್.ಪೂಜಾರಿ, ಸಾಕ್ಷತ್ ಕೋಟ್ಯಾನ್, ಪ್ರಣವ್ ಎಸ್.ಸಾಲ್ಯಾನ್, ತ್ರಿಶಾ ಜಿ.ಪೂಜಾರಿ ಹಾಗೂ ತ್ರಿಶಾ ಜಿ.ಕೋಟ್ಯಾನ್ ಅವರನ್ನು ಪುರಸ್ಕರಿಸಲಾಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್, ಗುರುದೇವ ಸಹಕಾರಿ ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಮಹಾಮಂಡಲ ಪ್ರತಿನಿಧಿ ಪ್ರಮೋದ್ ಸಾಲ್ಯಾನ್, ಸಂಘದ ಗೌರವಾಧ್ಯಕ್ಷ ಪ್ರದ್ಮನಾಭ ಎಸ್.ಅಮೀನ್ ಕಡೇಕಾರು, ಸೇವಾದಳದ ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಗಣೇಶ್, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ಶಿವರಾಮ ಅಮೀನ್ ಉಪಸ್ಥಿತರಿದ್ದರು.
ಸುಕೇಶ್ ಕೋಟ್ಯಾನ್ ಹಾಗೂ ಜಾನಕಿ ವಸಂತ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.