ಗಣತಿ ಕಾರ್ಯಕ್ಕೆ ಗೈರು-ಶಿಸ್ತುಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ
ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-೨೦೨೫ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ಜಿಲ್ಲಾದ್ಯಂತ ಗಣತಿದಾರರು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಮನೆ ಮನೆ ಸಮೀಕ್ಷೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಈ ಸಮೀಕ್ಷಾ ಕಾರ್ಯವನ್ನು ನಿರ್ವಹಿಸಲು ಜಿಲ್ಲಾಡಳಿತದಿಂದ ಮಂಗಳೂರು ತಾಲೂಕಿನಲ್ಲಿ 1714 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಇದುವರೆಗೆ 425 ಗಣತಿದಾರರು ಸಮೀಕ್ಷೆ ಕಾರ್ಯಕ್ಕೆ ಹಾಜರಾಗದೆ ಕರ್ತವ್ಯಲೋಪ ತೋರಿಸಿರುವುದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ.
ಈ ಗಣತಿ ಕಾರ್ಯವನ್ನು ಸರ್ಕಾರವು ನಿಗದಿಪಡಿಸಿ ಆದೇಶಿಸಿದಂತೆ ಅ.7 ರ ಒಳಗಾಗಿ ಮುಕ್ತಾಯಗೊಳಿಸಲು ಸರ್ಕಾರದ ನಿರ್ದೇಶನವಿರುತ್ತದೆ. ಆದುದರಿಂದ ಸಮೀಕ್ಷೆ ಕಾರ್ಯಕ್ಕೆ ಹಾಜರಾಗದೆ ಕರ್ತವ್ಯ ನಿರ್ಲಕ್ಷ್ಯತೆ ತೋರಿದಂತ ಗಣತಿದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು ಜಿಲ್ಲಾಡಳಿತದ ತೀರ್ಮಾನವಾಗಿದೆ. ಈ ನಿಟ್ಟಿನಲ್ಲಿ ಗೈರುಹಾಜರಾಗಿರುವ ಎಲ್ಲಾ ಗಣತಿದಾರರು ಈ ಕೂಡಲೇ ಸಮೀಕ್ಷೆ ಕಾರ್ಯಕ್ಕೆ ಹಾಜರಾಗುವಂತೆ, ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.