ವಿದ್ಯುತ್ ಪೋಲು ತಡೆಗೆ ವಿಶೇಷ ಮುತುವರ್ಜಿ: ಕೆ.ಹರೀಶ್ ಕುಮಾರ್
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಸೋರಿಕೆ ತಡೆಗೆ ವಿಶೇಷ ಕ್ರಮದ ಅಗತ್ಯವಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಬೀದಿದೀಪಗಳು ದಿನವಿಡೀ ಉರಿಯುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪಂಚಾಯತ್‌ಗಳಿಗೆ ಈ ನಿಟ್ಟಿನಲ್ಲಿ ಸ್ಪಷ್ಟ ಸೂಚನೆ ನೀಡುವ ಮೂಲಕ ವಿದ್ಯುತ್ ಪೋಲಾಗುವುದನ್ನು ತಪ್ಪಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಸಾರ್ವಜನಿಕರು ಕೂಡ ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಬೇಕು. ವಿದ್ಯುತ್ ಪೋಲಾಗುವುದನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.
ಮೆಸ್ಕಾಂ ಪವರ್ ಮ್ಯಾನ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಪ್ರತಿ ಬಾರಿ ಆಯ್ಕೆಗಳು ನಡೆದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಯುವಕರು ಅರ್ಜಿ ಹಾಕುವುದು ಕಡಿಮೆ. ಹಾಕಿದರೂ ಶೇ.50 ಶೈಕ್ಷಣಿಕ ಅಂಕಕ್ಕಿಂತ ಕಡಿಮೆ ಅಂಕ ಹೊಂದಿದವರು ಅರ್ಜಿ ಹಾಕುತ್ತಾರೆ. ಆದ್ದರಿಂದ ಉತ್ತರ ಕರ್ನಾಟಕದ ಮಂದಿಯೇ ಹೆಚ್ಚಾಗಿ ಆಯ್ಕೆಯಾಗುತ್ತಿದ್ದು, ಮೂರು ವರ್ಷಗಳ ಕರ್ತವ್ಯದ ಬಳಿಕ ಅವರು ವರ್ಗಾವಣೆ ಪಡೆಯುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪವರ್ ಮ್ಯಾನ್‌ಗಳ ಸಮಸ್ಯೆ ಕಾಡುತ್ತಿದೆ. ಸರಕಾರದ ಗಮನ ಸೆಳೆಯುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದವರು ಹೇಳಿದರು.
ಆಗಾಗ ಪವರ್ ಕಟ್ ಸಮಸ್ಯೆಯಿಂದ ಕೃಷಿಕರು ಸೇರಿದಂತೆ ಕೈಗಾರಿಕೋದ್ಯಮಿಗಳು ಸಮಸ್ಯೆ ಎದುರಿಸುತ್ತಿರುವುದು ಗಮನದಲ್ಲಿದೆ. ಇದೆಲ್ಲವನ್ನು ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸೀಡ್ ಆಂಡ್ ಆರ್ಗಾನಿಕ್ ಸರ್ಟಿಫಿಕೇಶನ್ ಏಜೆನ್ಸಿ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ., ನೀರಾಜ್ ಪಾಲ್, ಸುಹಾನ್ ಆಳ್ವ, ಚಿತ್ತರಂಜನ್ ಶೆಟ್ಟಿ, ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, ಶುಭೋದಯ ಆಳ್ವ, ಜಿತೇಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.