ಅ.5 ರಂದು ಅಲಂಗಾರು ಶ್ರೀ ಗುರುಮಠದಲ್ಲಿ ಶ್ರೀ ಗುರು, ವಿಶ್ವಕರ್ಮ ಯಜ್ಞ, ಮುಷ್ಟಿಕಾಣಿಕೆ ಸಮರ್ಪಣೆ
ಮೂಡುಬಿದಿರೆ: ಹದಿನಾಲ್ಕನೇ ಶತಮಾನದಲ್ಲಿ ವಿಜಯನಗರದ ಕಡೆಯಿಂದ ಬಂದು, ಮೂಡುಬಿದಿರೆ ಸಹಿತ ಅವಿಭಜಿತ ದ.ಕ. ಜಿಲ್ಲೆಯ ಹಲವೆಡೆ ಪವಾಡಪುರುಷರಾಗಿ ಮೆರೆದ ಜಗದ್ಗುರು ಶ್ರೀ ಅಯ್ಯ ಸ್ವಾಮಿಯವರ ಸಾನಿಧ್ಯ ಕ್ಷೇತ್ರವಾಗಿರುವ ಅಲಂಗಾರು ಶ್ರೀಗುರುಮಠದಲ್ಲಿ ನಡೆಸಲು ಉದ್ದೇಶಿಸಿರುವ ಸಮಗ್ರ ಜೀರ್ಣೋದ್ಧಾರ ಕಾರ್ಯಗಳ ಪೂರ್ವಭಾವಿಯಾಗಿ ಶ್ರೀ ಗುರು, ವಿಶ್ವಕರ್ಮ ಯಜ್ಞ ಮತ್ತು ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಅ.5 ರಂದು ಬೆಳಗ್ಗೆ 10 ಗಂಟೆಗೆ ಪಡುಕುತ್ಯಾರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಮತ್ತು ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನಮೂರ್ತಿ ಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ ಜರಗಲಿದೆ.
ಉಭಯ ಸ್ವಾಮೀಜಿಯವರೊಂದಿಗೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಕೇಶವ ತಂತ್ರಿವರ್ಯರ ಅಧ್ಯಕ್ಷತೆಯಲ್ಲಿ ಸಮಿತಿ ಗೌರವಾಧ್ಯಕ್ಷ ಧನಂಜಯ ಪಾಲ್ಕೆ, ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತರು, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ ಇವರ ಉಪಸ್ಥಿತಿಯಲ್ಲಿ ಪೂ.ಗಂ. 11ಕ್ಕೆ ಧಾರ್ಮಿಕ ಸಭೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಸದಸ್ಯ ಪಿ.ಕೆ. ಥಾಮಸ್, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಿಥುನ್ ರೈ, ಅವಿಭಜಿತ ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಈಶ್ವರ ಭಟ್ ಅಲಂಗಾರು, ರೆ.ಫಾ. ಮೆಲ್ವಿನ್ ನೊರೊನ್ಹಾ, ಆಳ್ವಾಸ್ ಪ್ರವರ್ತಕ ಡಾ. ಎಂ. ಮೋಹನ ಆಳ್ವ, ಪ್ರಮುಖರಾದ ಶ್ರೀಪತಿ ಭಟ್, ಚೌಟರ ಅರಮನೆ ಕುಲದೀಪ ಎಂ., ಬಿ. ಸೂರ್ಯಕುಮಾರ್ ಹಳೆಯಂಗಡಿ, ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್, ವಾಸ್ತುಶಿಲ್ಪಿ ಉಮೇಶ್ ಆಚಾರ್ಯ ಮುಂಚೂರು ಸುರತ್ಕಲ್, ಉದ್ಯಮಿ ಮಧುಕುಮಾರ್ ಹಾಸನ, ವಿವಿಧ ಕಾಳಿಕಾಂಬಾ ದೇವಳಗಳ ಮೊಕ್ತೇಸರರು, ವಿವಿಧ ಸಮಿತಿಗಳು, ಸಂಘಟನೆಗಳ ಅಧ್ಯಕ್ಷರು, ಉದ್ಯಮಿಗಳು, ದಾನಿಗಳ ಸಹಿತ ಗಣ್ಯರು ಪಾಲ್ಗೊಳ್ಳಿದ್ದಾರೆ.
ಮಧ್ಯಾಹ್ನ ಗಂ. 2ರಿಂದ ಯಕ್ಷಗಾನಾಚಾರ್ಯ ಅರ್ಕುಳ ಸುಬ್ರಾಯ ಆಚಾರ್ಯ ಸಂಸ್ಮರಣ, ಪ್ರಶಸ್ತಿ ಪ್ರದಾನ, ಮತ್ತು ಹೆಸರಾಂತ ಕಲಾವಿದರಿಂದ ತಾಳಮದ್ದಳೆ ಏರ್ಪಡಿಸಲಾಗಿದೆ. ಭಕ್ತಾದಿಗಳು ಮುಷ್ಟಿ ಕಾಣಿಕೆ ಸಮರ್ಪಣೆಗಾಗಿ ಶ್ರೀ ಮಠದಲ್ಲಿಯೂ ನಾಣ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.