ಮಾದಕ ದ್ರವ್ಯ ಪತ್ತೆ-ಪೊಲೀಸ್ ವಿಶೇಷ ಕಾರ್ಯಾಚರಣೆ: ಮೂವರ ಬಂಧನ
ಮಂಗಳೂರು: ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಸಾರ್ವಜನಿಕರ ಸುರಕ್ಷತೆ ಹಾಗೂ ಮಾದಕ ದ್ರವ್ಯರಹಿತ ವಾತಾವರಣಕ್ಕಾಗಿ ಮುನ್ನೆಚ್ಚರಿಕಾ ಹಾಗೂ ತಡೆಗಟ್ಟುವ ವಿಶೇಷ ಕಾರ್ಯಾಚರಣೆ ನಡೆಸಿದೆ.
ಈ ಕಾರ್ಯಾಚರಣೆಯಡಿ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗುಪ್ತಚರ ಮಾಹಿತಿ ಆಧಾರದ ಮೇಲೆ ಸುಮಾರು 1,000 ಶಂಕಿತರ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 52 ಮಂದಿ ಮಾದಕ ದ್ರವ್ಯ ಸೇವನೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ.
ಪಾಸಿಟಿವ್ ಆಗಿ ಪತ್ತೆಯಾದವರಲ್ಲಿ 25 ವಿದ್ಯಾರ್ಥಿಗಳು (ಇವರಲ್ಲಿ 2 ಮಂದಿ ಸ್ಥಳೀಯರು ಹಾಗೂ ೨೩ ಮಂದಿ ಜಿಲ್ಲೆಯ ಹೊರಗಿನವರು) ಇದ್ದರೆ, ಉಳಿದ 27 ಮಂದಿ ವಿದ್ಯಾರ್ಥೇತರರು ಆಗಿದ್ದು, ಇವರಲ್ಲಿ 17 ಮಂದಿ ಕಾರ್ಮಿಕರು ಹಾಗೂ 10 ಮಂದಿ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಆಗಿದ್ದಾರೆ. ಇವರಿಗೆ ಕಾನೂನು ಪ್ರಕಾರ ಸೂಕ್ತ ಕ್ರಮಗಳೊಂದಿಗೆ ಸಮಾಲೋಚನೆ (ಕೌನ್ಸೆಲಿಂಗ್) ನೀಡಲಾಗುತ್ತಿದೆ.
ಜತೆಗೆ ಮಂಗಳೂರು ನಗರ ಪೊಲೀಸ್‌ರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಾದಕ ದ್ರವ್ಯ ಮಾರಾಟಗಾರರನ್ನು ಬಂಧಿಸಿದ್ದಾರೆ. ಒಂದು ಪ್ರಕರಣದಲ್ಲಿ ಡಿಸೆಂಬರ್ 30ರಂದು 50 ಗ್ರಾಂಕ್ಕಿಂತ ಹೆಚ್ಚು ಎಂಡಿಎಂಎ (ಒಆಒಂ) ವಶಪಡಿಸಿಕೊಳ್ಳಲಾಗಿದ್ದು, ಮತ್ತೊಂದು ಪ್ರಕರಣದಲ್ಲಿ 200 ಗ್ರಾಂ ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಮೂವರಿಗೂ ಅಪರಾಧ ಹಿನ್ನೆಲೆ ಇದ್ದು, ಅವರು ಈಗಾಗಲೇ ಪೊಲೀಸ್ ನಿಗಾವಿನಲ್ಲಿ ಇದ್ದವರು ಎಂದು ತಿಳಿದುಬಂದಿದೆ.
ಈ ವ್ಯಾಪಕ ಕಾರ್ಯಾಚರಣೆಯಿಂದ ಮಾದಕ ದ್ರವ್ಯ ಸೇವನೆ ಮಾಡುವವರ ಪ್ರೊಫೈಲ್ ಹಾಗೂ ಪ್ರವೃತ್ತಿಗಳ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ತಡೆಗಟ್ಟುವ ಕ್ರಮಗಳನ್ನು ಇನ್ನಷ್ಟು ಬಲಪಡಿಸಲು ಸಹಕಾರಿಯಾಗಿದೆ. ಯುವಜನರನ್ನು ರಕ್ಷಿಸುವುದು, ಸಮಾಜವನ್ನು ಸುರಕ್ಷಿತವಾಗಿಡುವುದು ಹಾಗೂ ಹಬ್ಬದ ಸಂಭ್ರಮವನ್ನು ಶಾಂತ ಮತ್ತು ಮಾದಕ ದ್ರವ್ಯರಹಿತವಾಗಿರಿಸಲು ಮಂಗಳೂರು ನಗರ ಪೊಲೀಸ್ ಇಲಾಖೆ ಸಂಪೂರ್ಣ ಬದ್ಧವಾಗಿದೆ.
ನಗರದ ಜವಾಬ್ದಾರಿಯುತ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಮಾದಕ ದ್ರವ್ಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಮಂಗಳೂರು ನಗರವನ್ನು ಸುರಕ್ಷಿತ ಹಾಗೂ ಸ್ವಚ್ಛವಾಗಿರಿಸಲು ಸಾಧ್ಯವೆಂದು ಪೊಲೀಸ್ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.