ಭ್ರಷ್ಟಾಚಾರ ಪ್ರಕರಣದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಆರೋಪ: ಹೊಸ ತಿರುವು
ಕುಂದಾಪುರ: ಉಡುಪಿಯಲ್ಲಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯ್ಕ ಎಂ.ಎನ್. ಅವರ ದೂರಿನ ಮೇರೆಗೆ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವೊಂದು ಇದೀಗ ಸಾಕ್ಷಿದಾರರಿಗೆ ಬೆದರಿಕೆ ಹಾಕಲಾಗಿದೆ ಎಂಬ ಕಾರಣದಿಂದ ಹೊಸ ತಿರುವು ಪಡೆದಿದೆ.
ಇದಕ್ಕೆ ಸಂಬಂಧಿಸಿದಂತೆ, ಸಾಕ್ಷಿದಾರರಿಗೆ ಬೆದರಿಕೆ ಹಾಕಿ ನೋಟರಿ ಪ್ರಮಾಣ ಪತ್ರ ಕಳುಹಿಸಿದ ಆರೋಪದ ಹಿನ್ನೆಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
2025ರ ಜ.22 ರಂದು ಮಹಮ್ಮದ್ ಹನೀಫ್ ಎಂ.ವಿ. ಅವರ ದೂರಿನ ಮೇರೆಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆಯ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಎಚ್. ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಶೇಖರ್ ಜಿ. ಅವರನ್ನು ದಸ್ತಗಿರಿ ಮಾಡಲಾಗಿತ್ತು.
ಬಂಧನದ ವೇಳೆ ಪಂಚಾಯತುದಾರರಾಗಿ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ ಹಾಗೂ ತಾಲೂಕು ಪಂಚಾಯತ್ ಕಚೇರಿ ವ್ಯವಸ್ಥಾಪಕ ರಾಮಚಂದ್ರ ಮಯ್ಯ ಉಪಸ್ಥಿತರಿದ್ದರು. ಅವರಿಗೆ ಆಡಿಯೋ ಸಂಭಾಷಣೆ ಕೇಳಿಸಲಾಗಿದ್ದು, ಅದರಲ್ಲಿ ಕೇಳಿಬಂದ ಧ್ವನಿ ಉಮಾಶಂಕರ್ ಹಾಗೂ ಶೇಖರ್ ಅವರದ್ದೇ ಎಂದು ಗುರುತಿಸಿ ಪಂಚನಾಮೆಗೆ ಸಹಿ ಮಾಡಿದ್ದಾರೆ ಎಂದು ದಾಖಲಾಗಿತ್ತು.
ಆದರೆ, ಬಳಿಕ 12/03/2025 ರಂದು ಪಂಚನಾಮೆಯ ಸಾಕ್ಷಿದಾರರು, ಆಪಾದಿತ ಉಮಾಶಂಕರ್ ಅವರು ತಮ್ಮ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ, ಛಾಪಾ ಕಾಗದದಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನೋಟರಿ ಪ್ರಮಾಣ ಪತ್ರವನ್ನು ಅಂಚೆ ಮೂಲಕ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಇದು ಈ ಭ್ರಷ್ಟಾಚಾರ ಪ್ರಕರಣ ತಿರುವು ಪಡೆಯಲು ಕಾರಣವಾಗಿದೆ.
ಇಲಾಖಾ ವಿಚಾರಣೆಯ ವೇಳೆ ಸಹ ಆಪಾದಿತರು ಬೆದರಿಕೆ ಹಾಕಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಖಾಸಗಿ ದೂರಿನ ಆಧಾರದಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 232ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದಂತೆ ಸಾಕ್ಷಿದಾರರ ಮೇಲೆ ಒತ್ತಡ ಹೇರುವ ಗಂಭೀರ ಆರೋಪಗಳಿಗೆ ಈ ಪ್ರಕರಣದಲ್ಲಿ ಕಾರಣವಾಗಿದ್ದು, ತನಿಖೆ ಚುರುಕುಗೊಂಡಿದೆ.