ಅಕ್ರಮ ಗೋಹತ್ಯಾ ಪ್ರಕರಣ: ಆರೋಪಿಯ ಮನೆ ಆವರಣ ಜಪ್ತಿ
ಬೆಳ್ತಂಗಡಿ ಬಾರ್ಯ ಗ್ರಾಮ, ಹೊಸವಕ್ಲು ಎಂಬಲ್ಲಿ ಫೆ.26ರಂದು ರಾತ್ರಿ ಮನೆಯೊಂದರ ಆವರಣದಲ್ಲಿ, ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ. ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿದ್ದ ಹೆಚ್ ಅಬ್ದುಲ್ ರಹಿಮಾನ್ ಎಂಬವರ ಮನೆಯ ಬಳಿ ತಲುಪಿದಾಗ, ಮನೆಯ ಆವರಣದಿಂದ ಇಬ್ಬರು ವ್ಯಕ್ತಿಗಳು ಓಡಿಹೋಗಿರುತ್ತಾರೆ.
ಈ ಸ್ಥಳವನ್ನು ಪರಿಶೀಲಿಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಿಡಲಾಗಿದ್ದು, ಸಮೀಪದಲ್ಲಿದ್ದ ಆಟೋ ರಿಕ್ಷಾದಲ್ಲಿಯೂ ಗೋಮಾಂಸದ ಪ್ಯಾಕೆಟ್ ಗಳು ಪತ್ತೆಯಾಗಿದ್ದು ಒಟ್ಟು 56 ಕೆಜಿ ಮಾಂಸ ಪತ್ತೆಯಾಗಿದೆ. ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ ಗೋಮಾಂಸ, ತೂಕದ ಯಂತ್ರ, ಅಟೋರಿಕ್ಷಾ, ಮೊಬೈಲ್ ಹಾಗು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು, ಪ್ರಕರಣದ ಆರೋಪಿ ಹೆಚ್ ಅಬ್ದುಲ್ ರಹಿಮಾನ್ ಜಾನುವಾರುಗಳ ವಧೆಗಾಗಿ ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿದೆ.