ಬೆಳಗ್ಗೆ ನೆಲಕ್ಕುರಳಿದ ಕಮಾನು ಸಂಜೆಗೆ ಯಥಾಸ್ಥಿತಿ!
ಇಲ್ಲಿನ ಸೇತುವೆ ಶಿಥಿಲಗೊಂಡ ಹಿನ್ನಲೆಯಲ್ಲಿ ಸೇತುವೆಯಲ್ಲಿ ಘನ ವಾಹನ ನಿಷೇಧಿಸಿ ತಹಶೀಲ್ದಾರರ ಆದೇಶದನ್ವಯ ಪುರಸಭೆ ಸೇತುವೆಗೆ ಕಬ್ಬಿಣದ ಕಮಾನು ಅಳವಡಿಸಿತ್ತು. ಆದರೆ ಈ ಕಮಾನನ್ನು ಅವೈಜ್ಞಾನಿಕವಾಗಿ ಅಳವಡಿಸಿದ್ದು, ಹಾಗೂ ಈ ಬಗ್ಗೆ ವಾಹನ ಸವಾರರ ಗಮನಕ್ಕೆ ಬರುವಂತೆ ಸ್ಥಳದಲ್ಲಿ ಯಾವುದೇ ಮುನ್ಸೂಚನಾ ಫಲಕ ಅಳವಡಿಸದ ಪರಿಣಾಮ ಹಲವು ಬಾರಿ ವಾಹನಗಳು ಢಿಕ್ಕಿ ಹೊಡೆದು ಇಲ್ಲಿನ ಕಮಾನು ಧರಾಶಾಹಿಯಾಗಿತ್ತು.
ಕೆಲವೊಮ್ಮೆ ವಾಹನಗಳೇ ಜಖಂಗೊಂಡು ಅಪಾಯಗಳು ಸ್ವಲ್ಪದರಲ್ಲೇ ತಪ್ಪಿ ಹೋಗಿರುವಂತ ಘಟನೆಗಳು ಸಂಭವಿಸಿವೆ. ಬಳಿಕ ಮತ್ತೆ ಈ ಕಮಾನನ್ನು ಭದ್ರವಾಗಿ ಅಳವಡಿಸಲಾಗಿತ್ತಾದರೂ ಎಲ್ಲಿಯೂ ಕಮಾನು ಅಳವಡಿಸಿದ ಬಗ್ಗೆ ಮುನ್ಸೂಚನೆ ಇಲ್ಲದ ಪರಿಣಾಮ ಮತ್ತೆ ಸೋಮವಾರ ಅದೇ ಅವಾಂತರ ಸಂಭವಿಸಿದ್ದು, ಕಬ್ಬಿಣದ ಕಮಾನು ನೆಲಕ್ಕುರುಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಜೆಯ ಹೊತ್ತಿಗೆ ಮೇಲೇರಿದ ಕಮಾನು:
ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯ ಎರಡು ತುದಿಗಳಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಕಮಾನಿನ ಪೈಕಿ ಒಂದು ತುದಿಯ ಕಮಾನು ಬೆಳಗ್ಗಿನ ಜಾವ ವಾಹನ ಢಿಕ್ಕಿಯಾಗಿ ನೆಲಕ್ಕುರುಳಿದರೆ ಸಂಜೆಯ ವೇಳೆಗೆ ಆ ಕಮಾನು ಮತ್ತೆ ಮೇಲೇರಿ ಯಥಾ ಸ್ಥಿತಿಯಲ್ಲಿ ನಿರ್ಮಿಸಲಾಗಿದೆ. ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಅಳವಡಿಸಲಾಗಿದ್ದ ಕಬ್ಬಿಣದ ಕಮಾನು ಸಂಜೆ ವೇಳೆ ಮತ್ತೆ ಯಥಾ ಸ್ಥಿತಿಯಲ್ಲಿ ಅದೇ ಕಂಬಕ್ಕೆ ಅಳವಡಿಸಲಾಗಿರುವುದು ಕಂಡು ಬಂದಿದೆ.
ವಾಹನ ಢಿಕ್ಕಿಯಾಗಿ ಕುಸಿದು ಬೀಳುವುದು ಬಳಿಕ ಅದೇ ಕಮಾನನ್ನು ಮತ್ತೆ ಯಥಾ ಸ್ಥಿತಿ ಅಳವಡಿಸುವ ಈ ಕ್ರಮ ಇದೀಗ ಸಾರ್ವಜನಿಕರ ಪಾಲಿಗೆ ಅಸುರಕ್ಷತೆ ಭಾವನೆ ಮೂಡಿಸಿದೆ. ವಾಹನ ಸವಾರರ ಹಾಗೂ ಸಾರ್ವಜನಿಕರ ಪಾಲಿಗೆ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಇಲ್ಲಿನ ಕಮಾನಿನ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಭದ್ರವಾಗಿ ಅಳವಡಿಸುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.